ಬೆಳಗಾವಿ : ಮರಾಠಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್ ನಿರ್ವಾಹಕ ಮತ್ತು ಚಾಲಕರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಖಂಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾರಾಯಣಗೌಡ್ರೆ ಬೆಳಗಾವಿಗೆ ಬನ್ನಿ, ಬಾಳೆಕುಂದ್ರಿಗೆ ಬನ್ನಿ, ಮರಾಠಿ ಬಾರದ ಕಾರಣಕ್ಕೆ ಮರಾಠಿ ಪುಂಡರಿಂದ ಹಲ್ಲೆಗೊಳಗಾದ ಬಸ್ ನಿರ್ವಾಹಕ ಮಹದೇವಪ್ಪ ಹುಕ್ಕೇರಿಯವರಿಗೆ ನ್ಯಾಯ ಕೊಡಿಸಿ ಎಂದು ನೂರಾರು ಮಂದಿ ಹೇಳುತ್ತಿದ್ದಾರೆ’ ಎಂದು ಹೇಳಿದ್ದಾರೆ.
ದೌರ್ಜನ್ಯಕ್ಕೆ ಒಳಗಾದ ಮಹದೇವಪ್ಪ ಅವರ ಮೇಲೆ ರಾತ್ರೋರಾತ್ರಿ ಒಂದು ಪ್ರಕರಣ ದಾಖಲಿಸಲಾಗಿದೆ. ಅದೂ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಆರೋಪಿಸಲಾದ ಸುಳ್ಳು ಪ್ರಕರಣ. ನಾನು ಬೆಳಗಾವಿಗೆ ಬಂದೇ ಬರುತ್ತೇನೆ. ಬಾಳೇಕುಂದ್ರಿಗೂ ಬಂದೇ ಬರುತ್ತೇನೆ. ಬಾಳೇಕುಂದ್ರಿಗೆ ಬರಲು ನನಗೆ ಯಾವ ಹಿಂಜರಿಕೆಯು ಇಲ್ಲ ಎಂದು ತಿಳಿಸಿದ್ದಾರೆ.