ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ಎಂದೇ ಪರಿಗಣಿಸಲ್ಪಟ್ಟಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಅವರು ಭವಿಷ್ಯದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಬಹುದು ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಖಾಸಗಿ ಟಿವಿ ವಾಹಿನಿಯೊಂದಿಗೆ ಮಾತನಾಡಿದ ರಾಜಣ್ಣ, ಸತೀಶ್ ಮತ್ತು ಸಿಎಂ ನಡುವಿನ ಸಂಬಂಧ ಹಳಸಿದೆ ಎಂಬ ವರದಿಯನ್ನು ರಾಜಣ್ಣ ತಳ್ಳಿ ಹಾಕಿದ್ದಾರೆ. ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯನವ್ರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬುದು ನೂರಕ್ಕೆ ನೂರರಷ್ಟು ಸುಳ್ಳು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರ ಬಗ್ಗೆ ಕಾಂಗ್ರೆಸ್ ಬಗ್ಗೆ ಅಸಮಾದಾನದ ಮಾತಿಲ್ಲ. ಇವೆಲ್ಲಾ ಊಹಪೋಹಗಳಷ್ಟೇ, ವೈಯುಕ್ತಿಕವಾಗಿ ಅವರಿಬ್ಬರು ಉತ್ತಮ ಸ್ನೇಹಿತರು, ಅವರ ಬಾಂಧವ್ಯ ಗಟ್ಟಿಯಾಗಿದೆ. ನಮ್ಮ ಸಮುದಾಯದಲ್ಲಿ (ಎಸ್ಟಿ ನಾಯಕ), ಸತೀಶ್ ಜಾರಕಿಹೊಳಿ ಅವರಿಗೆ ಭವಿಷ್ಯದಲ್ಲಿ ಅತ್ಯುನ್ನತ ಹುದ್ದೆ (ಸಿಎಂ)ಸಿಗುವ ಅವಕಾಶವಿದೆ ಎಂದು ರಾಜಣ್ಣ ಹೇಳಿದರು.
ಇದೇ ವೇಳೆ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ತಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದರೆ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಉದಾಹರಣೆಯನ್ನು ರಾಜಣ್ಣ ಉಲ್ಲೇಖಿಸಿದರು. ರಾಜ್ಯದಲ್ಲಿ ಹೆಚ್ಚಿನ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವಂತೆ ರಾಜಣ್ಣ ಈ ಹಿಂದೆ ಒತ್ತಾಯಿಸಿದ್ದರು.