ದೇವನಹಳ್ಳಿ :
ನನಗೇನೂ ವಿರೋಧ ಪಕ್ಷದ ನಾಯಕನಾಗುವ ಹಂಬಲ ಇಲ್ಲ. ಒಂದು ವೇಳೆ ಆದರೆ ಅದರ ಮಜಾನೇ ಬೇರೆ. ಸರ್ಕಾರಕ್ಕೆ ಸರಿಯಾಗಿ ಉತ್ತರ ನೀಡುತ್ತೇನೆ. ಕಾಂಗ್ರೆಸ್ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೇ…ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದ್ದಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದರು.
‘ಕಾಂಗ್ರೆಸ್ನವರು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ನನ್ನ ಮೇಲೆ ಯಾವುದೇ ಆರೊಪವಿಲ್ಲ. ನನ್ನನ್ನು ಬ್ಲ್ಯಾಕ್ಮೇಲ್ ಮಾಡಲು ಅವರಿಂದ ಸಾಧ್ಯವಿಲ್ಲ’ ಎಂದರು.
‘ಯು.ಟಿ.ಖಾದರ್ ನೂತನ ಸಭಾಧ್ಯಕ್ಷರಾಗಿ ಆಯ್ಕೆ ಆಗಿರುವುದಕ್ಕೆ ಯಾವುದೇ ತಕರಾರು ಇಲ್ಲ. ಆದರೆ, ಅವರಿಗೆ ಕನ್ನಡವನ್ನೇ ಸ್ಪಷ್ಟವಾಗಿ ಮಾತನಾಡಲು ಬರಲ್ಲ ಎಂಬುವುದೇ ಬೇಸರದ ಸಂಗತಿ. ಕೆಲವು ಶಾಸಕರು ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆಗ ಕನ್ನಡಪರ ಹೋರಾಟಗಾರರು ಎಲ್ಲಿಗೆ ಹೋಗಿದ್ದರು? ಬಹುಶಃ ಅವರೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಯಲ್ಲಿ ಮಲಗಿರಬೇಕು’ ಎಂದು ಲೇವಡಿ ಮಾಡಿದರು.
‘ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನ’ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯವರೆಗೆ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇರುತ್ತದೆ. ಅಲ್ಲಿಯವರೆಗೆ ಗ್ಯಾರಂಟಿ ಕೆಲಸ ಮಾಡಿರುತ್ತಾರೆ. ನಂತರ ಕಾಂಗ್ರೆಸ್ ಸರ್ಕಾರದ ವಾರಂಟಿಯೂ ಮುಗಿದಿರುತ್ತದೆ. ಅಲ್ಲಿಗೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಯತ್ನಾಳ ಹೇಳಿದರು. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ದೇಶದಲ್ಲಿ ಮತ್ತೆ ಹಿಂದುತ್ವ ರಾರಾಜಿಸುತ್ತದೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ. ನೂರಾರು ಡಿ.ಕೆ.ಶಿವಕುಮಾರ್ ಬಂದರೂ ಏನು ಮಾಡಲು ಸಾಧ್ಯವಿಲ್ಲ ಎಂದರು.