ಬೆಳಗಾವಿ : ಕಾಂಗ್ರೆಸ್ ಪಕ್ಷದಿಂದ ಮಾತ್ರ ದೀನ ದಲಿತರ ಏಳಿಗೆ ಸಾಧ್ಯ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮಹಿಳಾ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ವಿನಂತಿಸಿದರು.
ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಡಗಾವಿ, ಹುಂಚನಹಟ್ಟಿ, ಪೀರಣವಾಡಿ, ಸಮರ್ಥ್ ನಗರದಲ್ಲಿ ಮತಯಾಚಿಸಿದ ಸಚಿವರು, ಕಾಂಗ್ರೆಸ್ ನಿಂದ ಯೋಗ್ಯ ಅಭ್ಯರ್ಥಿ ಸ್ಪರ್ಧಿಸಿದ್ದು, ಈ ಬಾರಿ ಕಾಂಗ್ರೆಸ್ ಜಯಿಸಲು ಉತ್ತಮ ವಾತಾವರಣವಿದೆ ಎಂದು ಹೇಳಿದರು.
*ಹೊರಗಿನ ಅಭ್ಯರ್ಥಿಯನ್ನು ತಿರಸ್ಕರಿಸಿ*
ಸಾಧನೆಯೂ ಇಲ್ಲದ, ಬೆಳಗಾವಿಗೆ ಸಂಬಂಧವೂ ಇಲ್ಲದ, ಬೆಳಗಾವಿಗೆ ನಿರಂತರ ಅನ್ಯಾಯ ಮಾಡಿರುವ ಜಗದೀಶ್ ಶೆಟ್ಟರ್ ಅವರನ್ನು ತಿರಸ್ಕರಿಸಿ, ಸ್ಥಳೀಯ ಮನೆ ಮಗ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಬೆಂಬಲಿಸಿ ಎಂದು ಸಚಿವರು ಮನವಿ ಮಾಡಿದರು. ಹುಬ್ಬಳ್ಳಿಯಲ್ಲಿ ಆರು ಬಾರಿ ಶಾಸಕರಾಗಿ, ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿ ಆಗಿದ್ದರೂ ಬಿಜೆಪಿಗೆ ದ್ರೋಹ ಎಸಗಿ ಕಳೆದ ವರ್ಷ ಕಾಂಗ್ರೆಸ್ ಗೆ ಬಂದರು. ಬಿಜೆಪಿ ನಾಯಕರನ್ನು ಬೈಯುತ್ತಲೇ ಏಕಾಏಕಿ ಕಾಂಗ್ರೆಸ್ ಬಿಟ್ಟು, ಬಿಜೆಪಿಗೆ ಹೋದರು. ಇಂತ ಸಮಯಸಾಧಕ ರಾಜಕಾರಣಿ ನಮ್ಮ ಜಿಲ್ಲೆಗೆ ಬೇಕಾ ಎಂದು ಪ್ರಶ್ನಿಸಿದರು.
ದೀನ ದಲಿತರ ಏಳಿಗೆಗಾಗಿ ಕಾಂಗ್ರೆಸ್ ಪಕ್ಷ ಹಲವು ಯೋಜನೆಗಳನ್ನ ತಂದಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಮನೆಗೆ ಸರಾಸರಿ 4 ರಿಂದ 5 ಸಾವಿರ ರೂಪಾಯಿ ತಲುಪುತ್ತಿದೆ. ಬಿಜೆಪಿ ಶ್ರೀಮಂತರ ಸಾಲ ಮನ್ನಾ ಮಾಡುವ ಮೂಲಕ ಶ್ರೀಮಂತರಿಗಷ್ಟೇ ಸೀಮಿತವಾಗಿದೆ ಎಂದು ಆರೋಪಿಸಿದರು. ಮೃಣಾಲ್ ಹೆಬ್ಬಾಳ್ಕರ್ ಗೆದ್ದರೆ ಕ್ಷೇತ್ರದ ಮನೆ ಮಗನಾಗಿ ಕೆಲಸ ಮಾಡಲಿದ್ದಾನೆ ಎಂದು ಹೇಳಿದರು. ನಿಮ್ಮ ಮಗನಿಗೆ ಮತ ನೀಡಿ, ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಕರೆ ನೀಡಿದರು.
ಸಚಿವರು ಹೋದಲೆಲ್ಲಾ ಸ್ಥಳೀಯ ಕಾರ್ಯಕರ್ತರು ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಶುರಾಮ ಢಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜೆ.ಪ್ರದೀಪ್ ಮೊದಲಾದವರು ಸಚಿವರಿಗೆ ಸಾಥ್ ನೀಡಿದರು.