ಮುಂಬೈ: ನವಿ ಮುಂಬೈನ ಡಿ.ವೈ. ಪಾಟೀಲ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2025 ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಮೂಲಕ ಭಾರತ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿತು.
ಭಾರತವು ಮೊದಲು ಬ್ಯಾಟ್ ಮಾಡಿ ನಿಗದಿತ ಓವರ್ಗಳಲ್ಲಿ 298 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. ಇದನ್ನು ಬೆನ್ನತ್ತಿದ ದಕ್ಷಿಣಾ ಆಫ್ರಿಕಾದ ಮಹಿಳಾ ತಂಡವು 246 ರನ್ಗಳಿಗೆ ಆಲೌಟ್ ಆಯಿತು. ಭಾರತದ ಗೆಲುವಿನಲ್ಲಿ ಶಫಾಲಿ ವರ್ಮಾ ಬ್ಯಾಟ್ ಮತ್ತು ದೀಪ್ತಿ ಶರ್ಮಾ ಬೌಲ್ ಮೂಲಕ ಮಿಂಚಿದರು
ಭಾರತದ ಬ್ಯಾಟಿಂಗ್ ವೈಭವ: ಶಫಾಲಿ ಮತ್ತು ದೀಪ್ತಿ ಶರ್ಮಾ ಆಕರ್ಷಣೆ:
ಪಂದ್ಯ ಆರಂಭಕ್ಕೂ ಮುನ್ನ ಸುದೀರ್ಘ ಮಳೆಯಿಂದ ವಿಳಂಬವಾದ ನಂತರ, ದಕ್ಷಿಣ ಆಫ್ರಿಕಾ ಮಹಿಳಾ ತಂಡವು ಟಾಸ್ ಗೆದ್ದು ಮೊದಲು ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.ಭಾರತದ ಇನ್ನಿಂಗ್ಸ್ ಅನ್ನು ಆರಂಭಿಸಿದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರು 106 ರನ್ಗಳ ಅತ್ಯುತ್ತಮ ಜೊತೆಯಾಟವನ್ನು ನೀಡಿದರು. ಮಂಧಾನ ಅವರು 45 ರನ್ ಗಳಿಸಿ ಕ್ಲೋಯ್ ಟ್ರೈಯಾನ್ ಬೌಲಿಂಗ್ನಲ್ಲಿ ಸಿಗ್ನಾಲೋ ಜಾಫ್ತಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅವರ ಸ್ಥಾನಕ್ಕೆ ಬಂದ ಜೆಮಿಮಾ ರಾಡ್ರಿಗಸ್ ಜೊತೆಯಾಟ ಆಡಿದರು. ಭಾರತದ ತಂಡದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಶಫಾಲಿ ವರ್ಮಾ ಅವರು 87 ರನ್ ಗಳಿಸಿ ಆಯಬೊಂಗಾ ಖಾಕಾ ಬೌಲಿಂಗ್ನಲ್ಲಿ ಸುನೆ ಲೂಸ್ಗೆ ಕ್ಯಾಚ್ ನೀಡಿದರು. ನಂತರ ಖಾಕಾ ಅವರು ಜೆಮಿಮಾ ರಾಡ್ರಿಗಸ್ (24 ರನ್) ಅವರನ್ನು ಕೂಡ ಔಟ್ ಮಾಡಿದರು. ನಾಯಕಿ ಹರ್ಮನ್ಪ್ರೀತ್ ಕೌರ್ ಅವರು 29 ಎಸೆತಗಳಲ್ಲಿ 20 ರನ್ಗಳ ಕೊಡುಗೆ ನೀಡಿದರು. ಅಂತಿಮ ಹಂತದಲ್ಲಿ ದೀಪ್ತಿ ಶರ್ಮಾ ಮತ್ತು ರಿಚಾ ಘೋಷ್ ಅವರ ವೀರಾವೇಶದ ಪ್ರದರ್ಶನದಿಂದಾಗಿ ಭಾರತವು ಬೃಹತ್ ಮೊತ್ತದೊಂದಿಗೆ ಇನ್ನಿಂಗ್ಸ್ ಮುಗಿಸಿತು. ದೀಪ್ತಿ ಶರ್ಮಾ (58) ರನ್ ಗಳಿಸಿ ರನ್ ಔಟ್ ಆದರೆ, ಘೋಷ್ ಕೇವಲ 24 ಎಸೆತಗಳಲ್ಲಿ 34 ರನ್ ಗಳಿಸಿ ತಂಡಕ್ಕೆ ಬಲ ತುಂಬಿದರು. ಭಾರತವು ದಕ್ಷಿಣ ಆಫ್ರಿಕಾಕ್ಕೆ ಕಪ್ ಗೆಲ್ಲಲು 299 ರನ್ಗಳ ಗುರಿ ನಿಗದಿಪಡಿಸಿತು.
ದೀಪ್ತಿ ಶರ್ಮಾ ಐದು ವಿಕೆಟ್ ಸಾಧನೆ
ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ್ತಿಯರಾದ ಲಾರಾ ವೋಲ್ವಾರ್ಡ್ಟ್ ಮತ್ತು ತಾಜ್ಮಿನ್ ಬ್ರಿಟ್ಸ್ ಮೊದಲ ವಿಕೆಟ್ಗೆ 51 ರನ್ಗಳ ಜೊತೆಯಾಟವಾಡಿದರು. ಬಳಿಕ ಅಮಂಜೋತ್ ಕೌರ್ ಅವರ ಅದ್ಭುತ ಫೀಲ್ಡಿಂಗ್ನಿಂದ ಬ್ರಿಟ್ಸ್ (23) ರನ್ ಔಟ್ ಆದರು. ಶ್ರೀಚರಣಿ ಅವರು ಆನೆಕೆ ಬೋಶ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ನಂತರ ಸುನೆ ಲೂಸ್ ಮತ್ತು ವೋಲ್ವಾರ್ಡ್ಟ್ ಕ್ರೀಸ್ಗೆ ನೆಲೆಯೂರಿದರು. ಆದರೆ ಶಫಾಲಿ ವರ್ಮಾ ಅವರ ಸ್ಪಿನ್ ದಾಳಿಗೆ ಲೂಸ್ (25) ಮತ್ತು ಮರಿಝನ್ನೆ ಕಪ್ (4) ಬೇಗನೆ ಔಟಾದರು. ದೀಪ್ತಿ ಶರ್ಮಾ ಅವರು ಸಿಗ್ನಾಲೋ ಜಾಫ್ತಾರನ್ನು (16) ಔಟ್ ಮಾಡುವ ಮೂಲಕ ವಿಕೆಟ್ ಗಳಿಕೆಯ ಬೇಟೆ ಆರಂಭಿಸಿದರು. ಒಂದೆಡೆ ವಿಕೆಟ್ಗಳು ಉರುಳುತ್ತಿದ್ದರೂ, ನಾಯಕಿ ಲಾರಾ ವೋಲ್ವಾರ್ಡ್ಟ್ ಅವರು ಜವಾಬ್ದಾರಿಯುತ ಇನ್ನಿಂಗ್ಸ್ ಆಡುತ್ತಾ ತಮ್ಮ ಶತಕವನ್ನು ಪೂರ್ಣಗೊಳಿಸಿದರು. 40 ನೇ ಓವರ್ನಲ್ಲಿ ಅವರ ಶತಕದೊಂದಿಗೆ, ಅಂತಿಮ 10 ಓವರ್ಗಳಲ್ಲಿ ಪ್ರೋಟಿಯಾಸ್ಗೆ 88 ರನ್ಗಳು ಬೇಕಿದ್ದವು.ಆದರೆ, ದೀಪ್ತಿ ಶರ್ಮಾ ಅವರ ಮ್ಯಾಜಿಕ್ ಮುಂದುವರೆಯಿತು. ಅಮನ್ ಜೋತ್ ಅವರು ಮೂರನೇ ಪ್ರಯತ್ನದಲ್ಲಿ ವೋಲ್ವಾರ್ಡ್ಟ್ ಅವರ ಪ್ರಮುಖ ಕ್ಯಾಚ್ ಪಡೆದು ದೀಪ್ತಿಗೆ ಮೂರನೇ ವಿಕೆಟ್ ತಂದುಕೊಟ್ಟರು. ವೋಲ್ವಾರ್ಡ್ಟ್ ಔಟಾದ ನಂತರ ದಕ್ಷಿಣ ಆಫ್ರಿಕಾ ಹಿನ್ನಡೆಗೆ ಜಾರಿತು. ನಂತರ ಟ್ರೈಯೋನ್ ದೀಪ್ತಿ ಅವರ ನಾಲ್ಕನೇ ಬಲಿಪಶುವಾದರು. ಕೊನೆಯಲ್ಲಿ ದೀಪ್ತಿ ಶರ್ಮಾ ಅವರು ಆಯಬೊಂಗಾ ಖಾಕಾರನ್ನು ರನ್ ಔಟ್ ಮಾಡಿ, ಬಳಿಕ ಡಿ ಕ್ಲರ್ಕ್ ಅವರ ವಿಕೆಟ್ ಪಡೆಯುವ ಮೂಲಕ ತಮ್ಮ ಐದನೇ ವಿಕೆಟ್ನೊಂದಿಗೆ ಭಾರತಕ್ಕೆ ಪ್ರಶಸ್ತಿಯನ್ನು ಖಚಿತಪಡಿಸಿದರು.
ಸಂಕ್ಷಿಪ್ತ ಸ್ಕೋರ್: ಭಾರತ ಮಹಿಳಾ ತಂಡ298/7 (50 ಓವರ್ಗಳು)ದಕ್ಷಿಣ ಆಫ್ರಿಕಾ ಮಹಿಳಾ ತಂಡ 246 ಆಲೌಟ್ (45.3 ಓವರ್ಗಳು) ಆದ ನಂತರ ಭಾರತವು ರನ್ಗಳ ಜಯಗಳಿಸಿತು.
ಶಫಾಲಿ ವರ್ಮಾ ಪಂದ್ಯ ಶ್ರೇಷ್ಠ ಆಟಗಾರ್ತಿ ಹಾಗೂ ದೀಪ್ತಿ ಶರ್ಮಾ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.
ಪಂದ್ಯಾವಳಿಯಲ್ಲಿ ಭಾರತ ತಂಡ ಗೆದ್ದ ಬಹುಮಾನದ ಮೊತ್ತ
ವಿಶ್ವಕಪ್ ಫೈನಲ್ನಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 52 ರನ್ಗಳಿಂದ ಸೋಲಿಸಿ 41.77 ಕೋಟಿ ರೂ.ಗಳ ಬೃಹತ್ ಬಹುಮಾನವನ್ನು ತನ್ನದಾಗಿಸಿಕೊಂಡಿತು. ಏತನ್ಮಧ್ಯೆ, ದಕ್ಷಿಣ ಆಫ್ರಿಕಾ ರನ್ನರ್-ಅಪ್ ಆಗಿ ಸ್ಥಾನ ಪಡೆದು 21.88 ಕೋಟಿ ರೂ.ಗಳ ಬಹುಮಾನವನ್ನು ಗೆದ್ದುಕೊಂಡಿತು.
ಐಸಿಸಿ ಈ ಪಂದ್ಯಾವಳಿಗೆ ದಾಖಲೆಯ $10 ಮಿಲಿಯನ್ ಬಹುಮಾನ ಮೊತ್ತವನ್ನು ಘೋಷಿಸಿತ್ತು, ಇದು 2023 ರ ಪುರುಷರ ವಿಶ್ವಕಪ್ಗಿಂತಲೂ ಹೆಚ್ಚಾಗಿದೆ.
ಪ್ರತಿ ತಂಡ ಗೆದ್ದ ಬಹುಮಾನದ ಮೊತ್ತ ಇಲ್ಲಿದೆ (ಸರಿಸುಮಾರು)
ಭಾರತ – 41.77 ಕೋಟಿ ರೂ.
ದಕ್ಷಿಣ ಆಫ್ರಿಕಾ – 21.88 ಕೋಟಿ ರೂ.
ಆಸ್ಟ್ರೇಲಿಯಾ – 11.95 ಕೋಟಿ ರೂ.
ಇಂಗ್ಲೆಂಡ್ – 11.95 ಕೋಟಿ ರೂ.
ಶ್ರೀಲಂಕಾ – 7.8 ಕೋಟಿ ರೂ.
ನ್ಯೂಜಿಲೆಂಡ್ – 7.8 ಕೋಟಿ ರೂ.
ಬಾಂಗ್ಲಾದೇಶ – 4.5 ಕೋಟಿ ರೂ.
ಪಾಕಿಸ್ತಾನ – 4.5 ಕೋಟಿ ರೂ.ಗಳನ್ನು ಪಡೆದಿದೆ.


