ಮುಂಬೈ : ನವಿ ಮುಂಬೈನ ಡಾ. ಡಿ.ವೈ. ಪಾಟೀಲ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜೆಮಿಮಾ ರಾಡ್ರಿಗಸ್ ಅವರ ಅಜೇಯ 127 ರನ್ ನೆರವಿನಿಂದ ಭಾರತ ತಂಡವು ಆಸ್ಟ್ರೇಲಿಯಾವನ್ನು 5 ವಿಕೆಟ್ಗಳಿಂದ ಸೋಲಿಸಿ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ರ ಫೈನಲ್ಗೆ ಪ್ರವೇಶಿಸಿದೆ.
ಆಸ್ಟ್ರೇಲಿಯಾ ತಂಡವನ್ನು 338 ರನ್ಗಳಿಗೆ ಆಲೌಟ್ ಆದ ನಂತರ, ಭಾರತವು ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್ಗಳನ್ನು ಬೆನ್ನಟ್ಟಿ, ಇನ್ನೂ ಒಂಬತ್ತು ಬಾಲ್ಗಳು ಬಾಕಿ ಇರುವಾಗಲೇ ಗುರಿಯನ್ನು ಮುಟ್ಟಿತು.
ಭಾನುವಾರ ಇದೇ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಆಸ್ಟ್ರೇಲಿಯಾ ತಂಡ ನೀಡಿದ್ದ 339 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಆಸ್ಟ್ರೇಲಿಯಾ ಆಘಾತ ನೀಡಿತು. ಶಫಾಲಿ ವರ್ಮಾ (10 ರನ್, 4 ಎಸೆತ) ಅವರು ಕಿಮ್ ಗಾರ್ತ್ ಬೌಲಿಂಗ್ನಲ್ಲಿ ಬೇಗನೆ ಔಟ್ ಆದರು. ಆಗ ಭಾರತದ ಸ್ಕೋರ್ 13/1. ನಂತರ ಕ್ರೀಸ್ಗೆ ಬಂದ ಜೆಮಿಮಾ ರಾಡ್ರಿಗಸ್ ಅವರು ಸ್ಮೃತಿ ಮಂಧಾನ ಅವರೊಂದಿಗೆ ವೇಗವಾಗಿ ರನ್ ಕಲೆ ಹಾಕಿದರು. 8.2 ಓವರ್ ಗಳಲ್ಲಿ ತಂಡ 50 ರನ್ ಕಲೆಹಾಕಿತು. ಆದರೆ, ಕಿಮ್ ಗಾರ್ತ್ ಬೌಲಿಂಗ್ನಲ್ಲಿ ಮಾಡಿ ಸ್ಮೃತಿ ಮಂಧಾನ (24 ರನ್, 24 ಎಸೆತ) ವಿಕೆಟ್ ಕೀಪರ್ ಅಲಿಸ್ಸಾ ಹೀಲಿಗೆ ಕ್ಯಾಚ್ ನೀಡಿದರು. 9.2 ಓವರ್ಗಳಲ್ಲಿ ಭಾರತ 59/2 ಕ್ಕೆ ಕುಸಿಯಿತು.
ನಾಯಕಿ ಹರ್ಮನ್ಪ್ರೀತ್ ಕೌರ್ ಎಚ್ಚರಿಕೆಯ ಆಟವಾಡಿದರೆ, ಜೆಮಿಮಾ ಬೌಂಡರಿಗಳನ್ನು ಬಾರಿಸುತ್ತಲೇ ಇದ್ದರು. ನಂತರ ಭಾರತದ ತಂಡವು 17 ಓವರ್ಗಳಲ್ಲಿ 100 ರನ್ ಗಡಿ ದಾಟಿತು. ಈ ಜೋಡಿ 53 ಎಸೆತಗಳಲ್ಲಿ 50 ರನ್ಗಳ ಜೊತೆಯಾಟವಾಡಿತು. ಜೆಮಿಮಾ 57 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ ಅರ್ಧಶತಕ ಪೂರೈಸಿದರು. ಅವರ ಜೊತೆಯಾಟ 99 ಎಸೆತಗಳಲ್ಲಿ 100 ಹಾಗೂ 140 ಎಸೆತಗಳಲ್ಲಿ 150 ರನ್ ಗಡಿ ದಾಟಿತು. ಹರ್ಮನ್ಪ್ರೀತ್ ಕೌರ್ 65 ಎಸೆತಗಳಲ್ಲಿ ತಮ್ಮ ಮೂರನೇ ಅರ್ಧಶತಕವನ್ನು ಪೂರೈಸಿದರು. ಈ ಮೂಲಕ ಆಸ್ಟ್ರೇಲಿಯಾದ ದಂತಕಥೆ ಬೆಲಿಂಡಾ ಕ್ಲಾರ್ಕ್ (ಆರು ಇನ್ನಿಂಗ್ಸ್ಗಳಲ್ಲಿ ನಾಲ್ಕು) ನಂತರದ ಸ್ಥಾನವನ್ನು ಪಡೆದರು. ಭಾರತ 31.2 ಓವರ್ಗಳಲ್ಲಿ 200 ರನ್ ಗಡಿ ತಲುಪಿತು.
ಆಸ್ಟ್ರೇಲಿಯಾದ ಅನ್ನಾಬೆಲ್ ಸತರ್ಲ್ಯಾಂಡ್ 167 ರನ್ಗಳ ಈ ಬೃಹತ್ ಜೊತೆಯಾಟವನ್ನು ಮುರಿದರು. ಹರ್ಮನ್ಪ್ರೀತ್ ಕೌರ್ (89 ರನ್, 88 ಎಸೆತ; 10 ಬೌಂಡರಿ, 3 ಸಿಕ್ಸರ್) ಗಾರ್ಡ್ನರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 35.3 ಓವರ್ ಗಳಲ್ಲಿ ಭಾರತದ ಮೊತ್ತ 226/3 ಆಯಿತು. ಇದು ಮಹಿಳಾ ನಾಕೌಟ್ ಪಂದ್ಯಗಳಲ್ಲಿ ಭಾರತದ ಅತಿ ದೊಡ್ಡ ಜೊತೆಯಾಟವಾಯಿತು. (2017ರ ಸೆಮಿಫೈನಲ್ನಲ್ಲಿ ಇದೇ ಎದುರಾಳಿಯ ವಿರುದ್ಧ ಹರ್ಮನ್ಪ್ರೀತ್ ಮತ್ತು ದೀಪ್ತಿ ಶರ್ಮಾ ಅವರ 137 ರನ್ಗಳ ಜೊತೆಯಾಟವನ್ನು ಹಿಂದಿಕ್ಕಿತು).
ನಂತರ ಬಂದ ದೀಪ್ತಿ ಶರ್ಮಾ ಆಕ್ರಮಣಕಾರಿ ಆಟವಾಡಿ ಕೆಲವು ಬೌಂಡರಿಗಳನ್ನು ಬಾರಿಸಿದರು, ಆದರೆ ಕೆಟ್ಟ ಕರೆಯಿಂದಾಗಿ ರನ್ ಔಟ್ ಆದರು (24 ರನ್, 17 ಎಸೆತ ). 40.5 ಓವರ್ಗಳಲ್ಲಿ ಭಾರತ 264/4ರ ಮೊತ್ತ ತಲುಪಿತು. ಜೆಮಿಮಾ ಕೇವಲ 115 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ ತಮ್ಮ ಮೂರನೇ ಏಕದಿನ ಶತಕವನ್ನು ಪೂರೈಸಿದರು. 2017ರ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹರ್ಮನ್ಪ್ರೀತ್ ಅವರ 171* ರನ್ ನಂತರ, ಸೆಮಿಫೈನಲ್ನಲ್ಲಿ ಶತಕ ಗಳಿಸಿದ ಎರಡನೇ ಭಾರತೀಯ ಆಟಗಾರ್ತಿ ಇವರಾದರು.
ರೀಚಾ ಘೋಷ್ ಲಾಂಗ್-ಆಫ್ ಮೇಲೆ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಭಾರತದ ಆಕ್ರಮಣಕಾರಿ ಉದ್ದೇಶವನ್ನು ಎತ್ತಿ ತೋರಿಸಿದರು. ಅಂತಿಮ ಎಂಟು ಓವರ್ಗಳಲ್ಲಿ ತಂಡಕ್ಕೆ 63 ರನ್ಗಳು ಅಗತ್ಯವಿತ್ತು.ರೀಚಾ ಅವರು, ಸತರ್ಲ್ಯಾಂಡ್ ಮತ್ತು ಗಾರ್ಡ್ನರ್ ಬೌಲಿಂಗ್ನಲ್ಲಿ ಬೌಂಡರಿಗಳನ್ನು ಹೊಡೆಯುತ್ತಾ ಸಾಗಿ ಐದು ಓವರ್ ಗಳಲ್ಲಿ 34 ರನ್ಗಳ ಬೇಕಾಗುವಲ್ಲಿಗೆ ತಂದು ನಿಲ್ಲಿಸಿದರು. 44.4 ಓವರ್ಗಳಲ್ಲಿ ತಂಡ 300 ರನ್ ಗಡಿ ತಲುಪಿತು. ಈ ವೇಳೆ ಸತರ್ಲ್ಯಾಂಡ್ ಅವರು ರೀಚಾ ಘೋಷ್ ವಿಕೆಟ್ ಪಡೆದರು; ರೀಚಾ ಘೋಷ್ (16 ಎಸೆತಗಳಲ್ಲಿ 26 ರನ್ ; 2 ಬೌಂಡರಿ, 2 ಸಿಕ್ಸರ್) ಔಟಾದರು. ಭಾರತಕ್ಕೆ 24 ಎಸೆತಗಳಲ್ಲಿ 29 ರನ್ಗಳ ಅಗತ್ಯವಿತ್ತು, ಸ್ಕೋರ್ 310/5 ರಲ್ಲಿತ್ತು.
ನಂತರ ಅಂತಿಮ ಮೂರು ಓವರ್ಗಳಲ್ಲಿ 23 ರನ್ಗಳ ಅಗತ್ಯವಿತ್ತು. ಸತರ್ಲ್ಯಾಂಡ್ ಅವರ 48ನೇ ಓವರ್ಗಳಲ್ಲಿ ಎರಡು ವೈಡ್ಗಳು ಮತ್ತು ಜೆಮಿಮಾ ಅವರು ಸಿಡಿಸಿದ ಎರಡು ಬೌಂಡರಿಗಳಿಂದ ಒತ್ತಡ ಕಡಿಮೆಯಾಯಿತು. ನಂತರ ಅಂತಿಮ ಎರಡು ಓವರ್ಗಳಲ್ಲಿ ಎಂಟು ರನ್ಗಳು ಬೇಕಾಗಿದ್ದವು. ಅಂತಿಮ ಓವರ್ಗಿಂತ ಮೊದಲೇ ಅಮನ್ಜೋತ್ ಸಿಂಗ್ ಗೆಲುವಿನ ರನ್ ಪೂರೈಸಿದರು. ಭಾರತ ಒಂಬತ್ತು ಎಸೆತ ಬಾಕಿ ಇರುವಾಗಲೇ ಜಯಗಳಿಸಿತು.
ಇದಕ್ಕೂ ಮೊದಲು, ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿ ಫೋಬ್ ಲಿಚ್ಫೀಲ್ಡ್ ಅವರ 93 ಎಸೆತಗಳಲ್ಲಿ 119 ರನ್ಗಳು ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದವು. ಎಲಿಸ್ ಪೆರ್ರಿ (77 ರನ್, 88 ಎಸೆತ) ಎರಡನೇ ವಿಕೆಟ್ಗೆ 155 ರನ್ಗಳ ಜೊತೆಯಾಟ ನೀಡಿದರೆ, ಆಶ್ಲೀ ಗಾರ್ಡ್ನರ್ (65 ರನ್, 45 ಎಸೆತ) ಅಂತಿಮ ಹಂತದಲ್ಲಿ ಅಬ್ಬರಿಸಿದರು.
ಬೌಲರ್ಗಳಿಗೆ ಇದು ಕಠಿಣ ದಿನವಾಗಿತ್ತು. ಯುವ ಸ್ಪಿನ್ನರ್ ಶ್ರೀ ಚರಣಿ ಮಾತ್ರ ರನ್ ಹರಿವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು (10 ಓವರ್ಗಳಲ್ಲಿ 2/49). ದೀಪ್ತಿ ಶರ್ಮಾ (2/73) ಎರಡು ಪಡೆದರೂ ದುಬಾರಿಯಾದರು. ಆಸ್ಟ್ರೇಲಿಯಾ ಪರ ಕಿಮ್ ಗಾರ್ತ್ (2/46) ಮತ್ತು ಅನ್ನಾಬೆಲ್ ಸತರ್ಲ್ಯಾಂಡ್ (2/69) ವಿಕೆಟ್ ಪಡೆದರು.
ಭಾರತ Vs ಆಸ್ಟ್ರೇಲಿಯಾ – ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ 338 ಆಲೌಟ್ (ಲಿಚ್ಫೀಲ್ಡ್ 119, ಎಲಿಸ್ ಪೆರ್ರಿ 77, ಆಶ್ಲೀ ಗಾರ್ಡ್ನರ್ 65; ದೀಪ್ತಿ ಶರ್ಮಾ 2/73, ಶ್ರೀ ಚರಣಿ 2/49).
ಭಾರತ 48.3 ಓವರ್ಗಳಲ್ಲಿ 341/5 (ಜೆಮಿಮಾ ರಾಡ್ರಿಗಸ್ ಅಜೇಯ 127, ಹರ್ಮನ್ಪ್ರೀತ್ ಕೌರ್ 89; ಕಿಮ್ ಗಾರ್ತ್ 2/46).

 
             
         
         
        
 
  
        
 
    