ಬೆಂಗಳೂರು : ನಾನು ಹೆದರಲ್ಲ: ರಾಜೀನಾಮೆ ನೀಡಲ್ಲ. ನಾನು ಹೋರಾಟದಿಂದ ಬಂದವನು. ನಿಮ್ಮ ಷಡ್ಯಂತ್ರವನ್ನು ಸೋಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು BJP-JDS ಗೆ ನೇರ ಎಚ್ಚರಿಕೆ ನೀಡಿದರು.
ಯಲಹಂಕದ ರಾಜ್ಯದ ಪ್ರಪಥಮ ನೈಸರ್ಗಿಕ ಅನಿಲ ಆಧಾರಿತ 370 ಮೆ.ವ್ಯಾ ಸಾಮರ್ಥ್ಯದ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನಾನು ರಾಜೀನಾಮೆ ಕೊಡ್ತೀನಿ ಅಂತ ಕಾಯ್ಕೊಂಡು ಕೂತಿದ್ದೀರಾ? ಯಾವ ತಪ್ಪನ್ನೂ ಮಾಡದ ನನ್ನನ್ನು ಷಡ್ಯಂತ್ರದಿಂದ ಇಳಿಸಲು ನೋಡುತ್ತಿದ್ದೀರ. ಇದು ಅಸಾಧ್ಯ. ನಾನು ಹೋರಾಟ ರಾಜಕಾರಣದಿಂದ ಬಂದವನು. ನಿಮ್ಮನ್ನು ರಾಜಕೀಯವಾಗಿ ಎದುರಿಗೆ ಗೆಲ್ತೀನಿ. ನಿಮ್ಮ ಷಡ್ಯಂತ್ರ ಸೋಲಿಸ್ತೀನಿ ಎಂದು ಬಹಿರಂಗವಾಗಿ ತೊಡೆತಟ್ಟಿದರು.
*ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿದ್ದೇವೆ*
ರಾಜ್ಯದ ಆರ್ಥಿಕ-ಸಾಮಾಜಿಕ ಪ್ರಗತಿಗೆ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬೇಕು. ಕೃಷಿ, ಕೈಗಾರಿಕೆ ಬೆಳವಣಿಗೆ ಆದರೆ ಮಾತ್ರ GDP ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಕೃಷಿ ಮತ್ತು ಕೈಗಾರಿಕೆ ಹಾಗೂ ವಸತಿಗೆ ಅಪಾರ ಪ್ರಮಾಣದ ವಿದ್ಯುತ್ ಅಗತ್ಯ. ಕೃಷಿ, ಕೈಗಾರಿಕೆ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಉದ್ಯೋಗದಿಂದ ಜಿಡಿಪಿ ಪ್ರಗತಿಯಾಗುತ್ತದೆ. ಆದ್ದರಿಂದ ನಾವು ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬಿಗಳಾಗುವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಅದರ ಭಾಗವಾಗಿಯೇ ಈ ವಿದ್ಯುತ್ ಉತ್ಪಾದನಾ ತಯಾರಿಕಾ ಘಟಕ ಲೋಕಾರ್ಪಣೆ ಮಾಡಿದ್ದೇನೆ ಎಂದರು.
1500 ಮೌಲ್ಯದ ಕೋಟಿ ವಿದ್ಯುತ್ ಅನ್ನು ನಾವು ಹೊರಗಡೆಗೆ ಮಾರಾಟ ಮಾಡಿದ್ದೇವೆ. ಕಳೆದ ವರ್ಷ ಮಳೆ ಬರಲಿಲ್ಲ. ಬರಗಾಲ ಇತ್ತು. ಬರಗಾಲದಲ್ಲೂ ಕೂಡ ನಾವು ಅಗತ್ಯ ವಿದ್ಯುತ್ ಪೂರೈಸಿದೆವು.
2030 ಕ್ಕೆ 60000 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಇದೆ. ಇದನ್ನು ನಾನು ಬಜೆಟ್ ನಲ್ಲೇ ಘೋಷಿಸಿದ್ದೇನೆ. ವರ್ಷದಿಂದ ವರ್ಷಕ್ಕೆ ವಿದ್ಯುತ್ ಬಳಕೆ, ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ನಾವು ಉತ್ಪಾದನೆ ಹೆಚ್ಚಿಸಿ ಸ್ವಾವಲಂಬಿ ಆಗಿದ್ದೇವೆ. ನಾವು ಹೊರಗಡೆಗೆ ವಿದ್ಯುತ್ ಮಾರಾಟ ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ ಎಂದರು.
ಯಲಹಂಕದ ವಿದ್ಯುತ್ ಸ್ಥಾವರಕ್ಕೆ ನಾವೇ ನಮ್ಮ ಸರ್ಕಾರದಲ್ಲೇ ಶಂಕು ಸ್ಥಾಪನೆ ಮಾಡಿದ್ದೆವು. ಈಗ ನಮ್ಮದೇ ಸರ್ಕಾರ ಇದನ್ನು ಲೋಕಾರ್ಪಣೆ ಕೂಡ ಮಾಡಿದ್ದೇವೆ.
*ಬೋನಸ್ ಘೋಷಣೆ*
ಯಲಹಂಕ ವಿದ್ಯುತ್ ಸ್ಥಾವರದ ಆರಂಭಕ್ಕೆ ಶ್ರಮಿಸಿದ ಎಲ್ಲಾ ಕಾರ್ಮಿಕರಿಗೆ 5000 ರೂಪಾಯಿ ಬೋನಸ್ ಅನ್ನು ಇದೇ ಸಂದರ್ಭದಲ್ಲಿ ಸಿಎಂ ಘೋಷಿಸಿದರು.
ವಿದ್ಯುತ್ ಸ್ಥಾವರದ ಶಬ್ದ ಸಂಪೂರ್ಣ ಕಡಿಮೆ ಮಾಡಲು ಶ್ರಮಿಸುತ್ತಿದ್ದೇವೆ.
ಡಿಸಿಎಂ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕರಾದ ಯಲಹಂಕ ವಿಶ್ವನಾಥ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್ ಮತ್ತು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.