ಬೆಳಗಾವಿ: ತವರು ಮನೆಗೆ ಹೊರಟ ಪತ್ನಿಯನ್ನು ತಡೆದುದಕ್ಕೆ ನಡೆದ ಜಗಳ ವಿಕೋಪಕ್ಕೆ ಹೋಗಿ ಹಗ್ಗದಿಂದ ಕುತ್ತಿಗೆ ಬಿಗಿದು ಪತ್ನಿಯನ್ನೇ ಪತಿರಾಯನೊಬ್ಬಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.
ನೇಗಿನಾಳದ ಫಕ್ಕಿರಪ್ಪ ಗಿಲಕ್ಕನವರ ಪತ್ನಿ ರಾಜೇಶ್ವರಿ ಗಿಲಕ್ಕನವರ (21) ಕೊಲೆಯಾದ ದುರ್ದೈವಿ. ಆರೋಪಿಯಾಗಿರುವ ಆಕೆಯ ಗಂಡ ಕೃಷಿಕ ನೇಗಿನಾಳದ ಫಕ್ಕಿರಪ್ಪ ಬಸಪ್ಪ ಗಿಲಕ್ಕನವರ (28) ಎಂಬವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜೇಶ್ವರಿ ಮತ್ತು ಫಕ್ಕಿರಪ್ಪರಿಗೆ ಮೂರು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ದಿನವೂ ಜಗಳ ನಡೆಯುತ್ತಿತ್ತು. ಮಂಗಳವಾರ ಮೃತ ಮಹಿಳೆಯ ತನ್ನ ತಮ್ಮನ ಕೈಗೆ ಗಾಯವಾಗಿದ್ದರಿಂದ ತವರು ಮನೆಗೆ ಹೋಗುವುದಾಗಿ ತಿಳಿಸಿದ್ದಾಳೆ. ಆಗ ಗಂಡ ಜಮೀನಿನಲ್ಲಿ ಕೆಲಸ ಇದೆ, ಈಗ ಹೋಗಬೇಡ ಎಂದು ಹೇಳಿದ್ದ. ಇದರಿಂದ ಇಬ್ಬರ ನಡುವೆ ಜಗಳ ವಿಕೋಪಕ್ಕೆ ಹೋಗಿ ಕೋಪಗೊಂಡ ಆರೋಪಿ, ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಹಗ್ಗ ತೆಗೆದುಕೊಂಡು ಬಂದು ಮಲಗಿದ್ದ ರಾಜೇಶ್ವರಿಯ ಕೊರಳಿಗೆ ಅದನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಬೈಲಹೊಂಗಲ, ಸಿಪಿಐ ಕಿತ್ತೂರ ಹಾಗೂ ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


