ನವದೆಹಲಿ: ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡು 94 ಮಂದಿ ಮೃತಪಟ್ಟಿರುವ ಘಟನೆ ಉತ್ತರ ನೈಜೀರಿಯಾದಲ್ಲಿ ನಡೆದಿದೆ. ಘಟನೆಯಲ್ಲಿ 50ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಉತ್ತರ ನೈಜೀರಿಯಾದ ಜಿಗಾವಾ ರಾಜ್ಯದ ಚೌರಾ ಸರ್ಕಾರಿ ಪ್ರದೇಶದ ಮಜಿಯಾ ಎಂಬ ಪ್ರದೇಶದಲ್ಲಿ ದುರ್ಘಟನೆ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಟ್ರಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ನಂತರ ಇಲ್ಲಿನ ನಿವಾಸಿಗಳು ಪೆಟ್ರೋಲ್ ಸಂಗ್ರಹಿಸಲು ಸೇರಿದಾಗ ಸ್ಫೋಟ ಸಂಭವಿಸಿದ್ದು, ಈವರೆಗೂ 94 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.