ಹುಬ್ಬಳ್ಳಿ ಕೆಎಂಸಿಆರ್ಐ ವೈದ್ಯರು ಹಾವು ಕಡಿತಕ್ಕೆ ಹೊಸ ಚಿಕಿತ್ಸಾ ವಿಧಾನ ಕಂಡುಹಿಡಿದಿದ್ದಾರೆ. ಈ ಸಂಶೋಧನೆ ದೇಶದಲ್ಲಿಯೇ ಮೊದಲು ನಡೆದಿದೆ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.
ಹುಬ್ಬಳ್ಳಿ : ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್ಐ) ಹಾವು ಕಡಿತಕ್ಕೊಳಗಾದವರಿಗೆ ಸುಧಾರಿತ ಚಿಕಿತ್ಸಾ ಕ್ರಮವನ್ನು ಕಂಡುಹಿಡಿದಿದೆ. ಹಾವಿನ ವಿಷ ಅರಿತು ಚಿಕಿತ್ಸೆ ನೀಡುವ ಸಂಶೋಧನೆ ಮಾಡಲಾಗಿದ್ದು, ಇದು ದೇಶದಲ್ಲಿಯೇ ಪ್ರಥಮ ಸಂಶೋಧನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಕ್ತ ಪರಿಶೀಲಿಸಿ ಚಿಕಿತ್ಸೆ: ಹಾವು ಕಡಿತಕ್ಕೊಳಗಾಗಿ ಕೆಎಂಸಿಆರ್ಐಗೆ ಬರುವವರಲ್ಲಿ ಕೆಲವರು ಕಚ್ಚಿದ ಹಾವಿನೊಟ್ಟಿಗೆ ಬರುತ್ತಿದ್ದರು. ವೈದ್ಯರಿಗೆ ತಾವು ತಂದ ಹಾವು ನೀಡಿ ಗಾಬರಿ ಹುಟ್ಟಿಸುತ್ತಿದ್ದರು. ಈಗ ಹಾಗೇನಿಲ್ಲ, ಹಾವು ಕಡಿದ ವ್ಯಕ್ತಿಯಿಂದ ರಕ್ತ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ. ಈ ಮೊದಲು ನೇರವಾಗಿ ಆ್ಯಂಟಿ ಸ್ನೇಕ್ ವೆನಮ್ಸ್ (ಎಎಸ್ವಿ) ಇಂಜೆಕ್ಷನ್ ಕೊಡಲಾಗುತ್ತಿತ್ತು. ಈಗ ಹಾವು ಕಡಿತದ ತೀವ್ರತೆ, ವಿಷದ ಪ್ರಮಾಣವನ್ನು ತಿಳಿದ ನಂತರ ಚಿಕಿತ್ಸೆ ನೀಡಲಾಗುತ್ತಿದೆ.
ಕೆಎಂಸಿಆರ್ಐನ ಬಹು ವಿಭಾಗೀಯ ಸಂಶೋಧನಾ ಘಟಕದಲ್ಲಿ (ಎಂಆರ್ಯು) ತಜ್ಞರ ತಂಡವಿದ್ದು, ಹಾವು ಕಡಿತಕ್ಕೊಳಗಾದವರು ನೇರವಾಗಿ ಇದೇ ಆಸ್ಪತ್ರೆಗೆ ಬಂದ ತಕ್ಷಣ ಅವರಿಂದ ರಕ್ತವನ್ನು ಪಡೆಯುತ್ತಾರೆ. ನಂತರ ಅದನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.
ಹಾವು ಕಡಿತದ ಜಾಗದಲ್ಲಿ ಬಾವು ಬರುವುದು, ಉಸಿರಾಟದ ಸಮಸ್ಯೆ, ರಕ್ತದೊತ್ತಡ, ಏರಿಳಿತ, ನರಮಂಡಲದಲ್ಲಿ ಉಂಟಾಗುವ ನ್ಯೂನತೆ, ರಕ್ತ ಹೆಪ್ಪುಗಟ್ಟುವುದನ್ನು ತಿಳಿದುಕೊಳ್ಳಲಾಗುತ್ತದೆ. ಹಾವಿನ ವಿಷದಲ್ಲಿರುವ ಕಿಣ್ವ ಅಂಶ ಪತ್ತೆ ಹಚ್ಚಲಾಗುತ್ತದೆ. ಎಲಿಸಾ ಯಂತ್ರದಿಂದ ಇದರ ಪ್ರಮಾಣ ಅಳೆಯಲಾಗುತ್ತದೆ. ನಂತರ ವೈದ್ಯರಿಗೆ ಎಎಸ್ವಿ ಇಂಜೆಕ್ಷನ್ ಕೊಡುವಂತೆ ಸೂಚಿಸಲಾಗುತ್ತದೆ.
ರಕ್ತದಲ್ಲಿ ಕಿಣ್ವ ಅಂಶ ಹೆಚ್ಚು ಇದ್ದಷ್ಟು ಹಾವು ಕಡಿತಕ್ಕೊಳಗಾದವರು ಬದುಕುಳಿಯುವುದು ಕಡಿಮೆ. ಹೀಗಾಗಿ, ಇದರ ಬಗ್ಗೆ ಮೊದಲೇ ತಿಳಿಯುವುದರಿಂದ ಯಾವ ರೀತಿಯ ಚಿಕಿತ್ಸೆ ನೀಡಬಹುದೆಂಬುದು ಈ ಸಂಶೋಧನೆಯಿಂದ ಗೊತ್ತಾಗಲಿದೆ.
ಗಾಯ ನೋಡಿದ ಬಳಿಕ ಇಂಜೆಕ್ಷನ್ ನಿರ್ಧಾರ: ಈ ಕುರಿತಂತೆ ಬಹು ವಿಭಾಗೀಯ ಸಂಶೋಧನಾ ಘಟಕದ ನೋಡಲ್ ಅಧಿಕಾರಿ ಡಾ. ರಾಮ ಕೌಲಗುಡ್ಡ ಅವರು ಪ್ರತಿಕ್ರಿಯಿಸಿ, ‘ಈ ಹಿಂದೆ ಹಾವು ಕಡಿತಕ್ಕೊಳಗಾದವರು ಆಸ್ಪತ್ರೆಗೆ ಬಂದ ನಂತರ ಎಎಸ್ವಿ ಇಂಜೆಕ್ಷನ್ ಕೊಡಲಾಗುತ್ತಿತ್ತು. ಆದ್ರೆ ಈಗ ಹಾವು ಕಡಿತಕ್ಕೊಳಗಾದ ವ್ಯಕ್ತಿಯ ಗಾಯದ ಪ್ರಮಾಣದ ಮೇಲೆ ನಿರ್ಧಾರ ಮಾಡಿ ಎಎಸ್ವಿ ಇಂಜೆಕ್ಷನ್ ಕೊಡುವುದನ್ನು ಕಡಿಮೆ ಮಾಡಲಾಗುತ್ತಿದೆ. ಎಎಸ್ವಿ ಇಂಜೆಕ್ಷನ್ ಬಹಳ ದುಬಾರಿಯದ್ದಾಗಿದೆ. ಈ ಇಂಜೆಕ್ಷನ್ ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಮಾತ್ರ ಕೊಡಬೇಕು ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ’ ಎಂದರು.
ವಿಷ ಕಡಿಮೆ ಇದ್ದರೆ ಔಷಧೋಪಚಾರ: ‘ಕಡಿದ ಹಾವು ಎಂಥದ್ದು ಎಂಬುದನ್ನು ರಕ್ತದ ಮಾದರಿ ಆಧಾರದ ಮೇಲೆ ಕಂಡು ಹಿಡಿಯಲಾಗುತ್ತದೆ. ಅದರ ಆಧಾರದ ಮೇಲೆ ಇಂಜೆಕ್ಷನ್ ನೀಡಲಾಗುತ್ತಿದೆ. ಹಾವಿನ ವಿಷ ಹೆಚ್ಚು ಇದ್ದವರಿಗೆ ಎಎಸ್ವಿ ಇಂಜೆಕ್ಷನ್, ಹಾವಿನ ವಿಷ ಕಡಿಮೆ ಇದ್ದವರಿಗೆ ಇಂಜೆಕ್ಷನ್ ನೀಡದೆ ಔಷಧೋಪಚಾರದ ಮೂಲಕ ವಿಷ ಕಡಿಮೆ ಮಾಡುವುದನ್ನು ಕಂಡು ಹಿಡಿಯಲಾಗಿದೆ. ಅದರಲ್ಲಿ ಹಾವಿನ ವಿಷವಿರುವ ಎರಡು ರಕ್ತದ ಮಾದರಿ ಕಂಡು ಹಿಡಿಯಲಾಗಿದೆ. ಅದರಲ್ಲಿ ಕೋಬ್ರಾದಲ್ಲಿ ವಿಷದ ಪ್ರಮಾಣ ಅಧಿಕವಿರುವ ವೈಪರ್ಸ್, ಕೈಟ್, ಸಾ ಸ್ಟೇಲ್ಸ್ ವೈಪರ್ಸ್, ರಸೆಲ್ಸ್ ವೈಪರ್ಸ್ ಹೀಗೆ ಭಿನ್ನವಾದ ಹಾವುಗಳು ಕಡಿದಿದ್ದರೂ ವಿಷದ ಪ್ರಮಾಣ ಅರಿತು ಚಿಕಿತ್ಸೆ ನೀಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
‘ಹಾವು ಕಡಿತಕ್ಕೊಳಗಾದವರು ಆಸ್ಪತ್ರೆಗೆ ಬಂದ ನಂತರ ಚಿಕಿತ್ಸೆಗೂ ಮುನ್ನ ವ್ಯಕ್ತಿಯ ರಕ್ತವನ್ನು ತೆಗೆದುಕೊಳ್ಳಲಾಗುವುದು. ನಂತರ 24 ತಾಸಿಗೆ ಮತ್ತೊಮ್ಮೆ, ಅದೇ ರೀತಿ 72 ತಾಸಿಗೊಮ್ಮೆ ರಕ್ತ ತೆಗೆದುಕೊಂಡು ನಾವು ಕಂಡುಹಿಡಿದ ಮಾದರಿ ಅಂಶಗಳ ಆಧಾರದ ಮೇಲೆ ಚಿಕಿತ್ಸೆ ಮುಂದುವರೆಸಲಾಗುತ್ತದೆ. ಇದಕ್ಕಾಗಿ 82 ಜನ ಹಾವು ಕಡಿತಕ್ಕೊಳಗಾದವರ ರಕ್ತ ಪರೀಕ್ಷೆ ಮಾಡಲಾಗಿದೆ. ರಕ್ತದಲ್ಲಿ ಕಂಡು ಬಂದ ಕಿಣ್ವಗಳ ಅಧಾರದ ಚಿಕಿತ್ಸೆ ನೀಡಲಾಗಿದೆ. ಇದರಿಂದ ಅವರ ದೇಹದಲ್ಲಿ ಆಗುವ ಬದಲಾವಣೆ ಆಧಾರದ ಮೇಲೆ ಚಿಕಿತ್ಸೆ ನೀಡಲು ನಮ್ಮ ಸಂಶೋಧನೆ ಸಹಕಾರಿಯಾಗಿದೆ’ ಎಂದು ತಿಳಿಸಿದರು.
‘ಈ ಅಧ್ಯಯನದಿಂದ ಹೇಗೆ ಚಿಕಿತ್ಸೆ ನೀಡಬೇಕು ಎಂಬ ಮಾರ್ಗ ಸಿಕ್ಕಂತಾಗಿದೆ. ಹಾವು ಕಡಿತದ ಗಂಭೀರತೆ ಹಾಗೂ ಜೀವಕ್ಕೆ ಅಪಾಯಕಾರಿ ಇದೆಯಾ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ. ಕೆಲವರಿಗೆ ವಿಷದ ಪ್ರಮಾಣ ಗೊತ್ತಾಗದೆ ಇರಬಹುದು. ಆಗ ನಮಗೆ ಏನೂ ಆಗಿಲ್ಲ, ವಿಷ ಇಳಿದಿದೆ, ಡಿಸ್ಚಾರ್ಜ್ ಮಾಡಿ ಅಂತ ರೋಗಿ ಹೇಳಬಹುದು. ಆಗ ನಮ್ಮ ಸಂಶೋಧನೆಯಿಂದ ಆತನನ್ನು ಡಿಸ್ಚಾರ್ಜ್ ಮಾಡಬೇಕಾ, ಬೇಡವೇ ಎಂಬುದು ಗೊತ್ತಾಗಲಿದೆ. ಈ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು’ ಎಂದರು.
‘ನಾವು ಮಾಡಿದ ಅಧ್ಯಯನವನ್ನು ಇಲ್ಲಿಯವರೆಗೂ ದೇಶದಲ್ಲಿ ಯಾರೂ ಮಾಡಿಲ್ಲ. ಈ ಸಂಶೋಧನೆಯಿಂದ ಎಎಸ್ವಿಯನ್ನು ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು ಎಂಬುದು ತಿಳಿದಿದೆ. ಗ್ರಾಮೀಣ ಭಾಗದಲ್ಲಿಯೂ ಈ ಸೌಲಭ್ಯ ಕೊಟ್ಟರೆ ಅಲ್ಲಿ ಹಾವು ಕಡಿತಕ್ಕೊಳಗಾದ ವ್ಯಕ್ತಿಗೆ ವಿಷದ ಪ್ರಮಾಣದ ತಿಳಿದು ಅಲ್ಲಿಯೇ ಚಿಕಿತ್ಸೆ ನೀಡಬಹುದು. ಒಂದು ವೇಳೆ ವಿಷದ ಪ್ರಮಾಣ ಹೆಚ್ಚಾಗಿರುವುದು ತಿಳಿದ ಮೇಲೆ ದೂರದ ಆಸ್ಪತ್ರೆಗೆ ಕಳುಹಿಸಲು ಅನುಕೂಲಕರವಾಗಲಿದೆ’ ಎಂದು ಹೇಳಿದರು.
ಮೊದಲ ಪ್ರಯೋಗಕ್ಕೆ 20 ಜನರು : 2020ರ ಜನವರಿಯಿಂದ ಡಿಸೆಂಬರ್ವರೆಗೆ ಹಾವು ಕಡಿತಕ್ಕೊಳಗಾದ ಧಾರವಾಡ ಜಿಲ್ಲೆಯ 20 ಜನರಿಂದ ವಿಷ ಪಡೆಯಲಾಗಿತ್ತು. ಇವರಲ್ಲಿ 16 ಪುರುಷರು ಮತ್ತು ನಾಲ್ವರು ಮಹಿಳೆಯರು ಇದ್ದರು. ಇವರೆಲ್ಲರೂ 18 ರಿಂದ 65 ವರ್ಷದೊಳಗಿನವರು. 17 ಜನರು ಕೃಷಿ ಹಿನ್ನೆಲೆ ಹೊಂದಿದ್ದು, 12 ಜನರಿಗೆ ಮೊಣಕಾಲು ಕೆಳಗೆ ಹಾವು ಕಡಿದಿತ್ತು. ತಪಾಸಣೆ ಬಳಿಕ ಕೆಲವರಿಗೆ 3 ತಾಸಿನೊಳಗೆ ಎಎಸ್ವಿ ಇಂಜೆಕ್ಷನ್ ಕೊಡಲಾಗಿತ್ತು. ಇನ್ನೂ ಕೆಲವರಿಗೆ 3ರಿಂದ 8 ತಾಸಿನೊಳಗೆ ಎಎಸ್ವಿ ಇಂಜೆಕ್ಷನ್ ಕೊಟ್ಟು ವಿಷ ಇಳಿಸಲಾಗಿತ್ತು. ಇದೇ ಮಾದರಿ ಈಗ ಮುಂದುವರಿದಿದೆ ಎಂದು ಡಾ. ರಾಮ ಕೌಲಗುಡ್ಡ ವಿವರಿಸಿದರು.