ಕಾರವಾರ: ಉತ್ತರ ಕರ್ನಾಟಕ ಮತ್ತು ಕರಾವಳಿ ಪ್ರದೇಶ ಬೆಸೆಯುವ ಬಹುನಿರೀಕ್ಷಿತ ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ ಕಾರ್ಯಗತಗೊಳ್ಳಬಹುದು ಎಂಬ ನಿರೀಕ್ಷೆ ಬಲವಾಗಿದೆ.
ಸಂಸತ್ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕರ್ನಾಟಕದಲ್ಲಿ 42 ಸಾವಿರ ಕೋಟಿಗೂ ಹೆಚ್ಚು ವೆಚ್ಚದ ವಿವಿಧ ಯೋಜನೆಗಳಿಗೆ ಮಂಜೂರಾತಿ ನೀಡಲು ಕ್ರಮವಹಿಸಲಾಗುವುದು ಎಂದು ಉತ್ತರಿಸಿದ್ದು, ಈ ಯೋಜನೆಗಳ ಪೈಕಿ ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆಯೂ ಸೇರಿದೆ ಎಂದು ತಿಳಿಸಿದ್ದಾರೆ.
1999ರಲ್ಲಿಯೇ ₹494 ಕೋಟಿ ವೆಚ್ಚದ ಯೋಜನೆಗೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಾಲನೆ ನೀಡಿದ್ದರು. ಹುಬ್ಬಳ್ಳಿಯಿಂದ ಕಲಘಟಗಿವರೆಗೆ 34 ಕಿ.ಮೀ ಉದ್ದ ರೈಲು ಮಾರ್ಗವೂ ನಿರ್ಮಾಣಗೊಂಡಿತ್ತು. ಆ ಬಳಿಕ ಯೋಜನೆ ನನೆಗುದಿಗೆ ಬಿದ್ದಿತ್ತು.
ಪರಿಸರಕ್ಕೆ ಹಾನಿಯಾಗಲಿದೆ ಎಂಬ ಕಾರಣ ನೀಡಿ ಪರಿಸರವಾದಿ ಸಂಘಟನೆಗಳ ಆಕ್ಷೇಪಣೆಯಿಂದ ಕಳೆದ ಮೂರು ದಶಕದಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಪಶ್ಚಿಮ ಘಟ್ಟ ಸೀಳಿಕೊಂಡು ಈಗಾಗಲೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ರೈಲು ಮಾರ್ಗದಿಂದ ಅರಣ್ಯಕ್ಕೆ, ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಧಕ್ಕೆ ಉಂಟಾಗಲಿದ್ದು, ವನ್ಯಜೀವಿಗಳ ಸಂಚಾರಕ್ಕೂ ಅಡ್ಡಿಯುಂಟಾಗಲಿದೆ ಎಂದು ವಾದಿಸಿದ್ದ ಪರಿಸರವಾದಿ ಸಂಘಟನೆಗಳು ಯೋಜನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.
ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆ ಕಾರ್ಯಗತವಾದರೆ ಅಭ್ಯಂತರ ಇಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ (ಎನ್ಜಿಟಿ) 2016ರಲ್ಲಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪರಿಸರವಾದಿಗಳು ಯೋಜನೆ ಕಾರ್ಯರೂಪಕ್ಕೆ ತರುವುದನ್ನು ಪ್ರಶ್ನಿಸಿದ್ದರು. 2024ರಲ್ಲಿ ಆದೇಶಿಸಿದ್ದ ಹೈಕೋರ್ಟ್ ವನ್ಯಜೀವಿ ಮಂಡಳಿ ಸಹಾಯದೊಂದಿಗೆ ಅಧ್ಯಯನ ಕೈಗೊಂಡು, ಪರಿಷ್ಕೃತ ಯೋಜನಾ ವರದಿ ಸಲ್ಲಿಸಲು ಸೂಚಿಸಿತ್ತು.
ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಯೋಜನೆ ಕೈಗೊಳ್ಳಬಹುದಾದ ಪ್ರದೇಶದಲ್ಲಿ ಮರು ಸಮೀಕ್ಷೆ ನಡೆಸಿದ್ದ ನೈರುತ್ಯ ರೈಲ್ವೆ ಫೆ.17 ರಂದು ಕೇಂದ್ರ ರೈಲ್ವೆ ಮಂಡಳಿಗೆ ಪರಿಷ್ಕೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಿತ್ತು. ಉದ್ದೇಶಿತ ಮಾರ್ಗದಲ್ಲಿನ ವನ್ಯಜೀವಿಗಳ ಕುರಿತು ಡೆಹರಾಡೂನ್ನ ಭಾರತೀಯ ವನ್ಯಜೀವಿ ಸಂಸ್ಥೆ ಪ್ರತ್ಯೇಕ ಅಧ್ಯಯನ ನಡೆಸಿತ್ತು.
ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಅಗತ್ಯವಾಗಿರುವ ಯೋಜನೆ. ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾದ ಎಲ್ಲ ಪ್ರಯತ್ನ ನಡೆಸುತ್ತಿದ್ದೇವೆ
ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ
ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ ಕುರಿತು ಕೇಂದ್ರ ಸಚಿವರ ಸಕಾರಾತ್ಮಕ ಉತ್ತರ ಹೊಸ ವಿಶ್ವಾಸ ಮೂಡಿಸಿದೆ. ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದನೆ ಸಿಗುವ ದಿನ ಹತ್ತಿರವಾಗಿದೆ-
ಶಿವರಾಮ ಹೆಬ್ಬಾರ,ಯಲ್ಲಾಪುರ ಶಾಸಕ
ಹುಬ್ಬಳ್ಳಿ- ಅಂಕೋಲಾ 163 ಕಿ.ಮೀ. ದೂರದ ಜೋಡಿ ರೈಲು ಮಾರ್ಗ ಮಂಜೂರಾಗಿದೆ ಎಂದು ರೈಲ್ವೆ ಸಚಿವರು ಹೇಳಿಕೆ ನೀಡಿರುವುದರಿಂದ ಯೋಜನೆಗೆ ಇರುವ ಎಲ್ಲ ಅಡ್ಡಿ ಆತಂಕಗಳು ನಿವಾರಣೆಯಾದಂತಾಗಿದೆ. ಯೋಜನೆಯ ಮಾರ್ಗದ ಮರು ಸಮೀಕ್ಷೆ ನಡೆಸಲಾಗಿದೆ. ಯೋಜನೆಗೆ ಅಗತ್ಯವಾದ ಯೋಜನಾ ವರದಿ ಸಲ್ಲಿಕೆಯಾಗಿದೆ. ₹17 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸುಮಾರು ಎರಡೂವರೆ ದಶಕಗಳ ಹಿಂದಿನ ಕನಸಿನ ಕೂಸಾದ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ಪರಿಸರ ಕಾರಣದಿಂದ ನನೆಗುದಿಗೆ ಬಿದ್ದ ಮೇಲೆ ಯೋಜನೆ ಜಾರಿಗಾಗಿ ಸುದೀರ್ಘ ಕಾನೂನು ಹೋರಾಟ, ಜನತೆಯ ಆಗ್ರಹ, ಪ್ರತಿಭಟನೆ, ಹೋರಾಟ ನಡೆಸಲಾಗಿತ್ತು.
ರೈಲ್ವೆ ಮಾರ್ಗಕ್ಕಾಗಿ ರಮಾನಂದ ನಾಯಕ, ರಾಜೀವ ಗಾಂವಕರ, ಜಾರ್ಜ್ ಫರ್ನಾಂಡಿಸ್, ವಿಠ್ಠಲದಾಸ ಕಾಮತ ಮತ್ತಿತರರು ಸುದೀರ್ಘ ಹೋರಾಟ ನಡೆಸಿದ್ದರು. ನ್ಯಾಯವಾದಿ ಆರ್.ಜಿ. ಕೊಲ್ಲೆ ಹೈಕೋರ್ಟಿನಲ್ಲಿ ವಾದ ಮಂಡಿಸಿ ಗಮನ ಸೆಳೆದಿದ್ದರು. ಎರಡೂವರೆ ದಶಕಗಳ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ ಎಂದು ಹೋರಾಟದಲ್ಲಿ ತೊಡಗಿಕೊಂಡಿದ್ದ ಪತ್ರಕರ್ತ ವಿಠ್ಠಲದಾಸ ಕಾಮತ್ ತಿಳಿಸಿದ್ದಾರೆ.
ಕರಾವಳಿಯನ್ನು ರಾಜ್ಯದ ವಾಣಿಜ್ಯ ನಗರಿಯಾದ ಹುಬ್ಬಳ್ಳಿಯ ಮೂಲಕ ರಾಜಧಾನಿ ಬೆಂಗಳೂರಿಗೆ ಬೆಸೆಯುವ ಈ ಮಾರ್ಗ ನಿರ್ಮಾಣವಾದ ಮೇಲೆ ಜಿಲ್ಲೆಯ ಕರಾವಳಿಯ ಅಭಿವೃದ್ಧಿಗೆ ಪ್ರಮುಖ ಕೊಡುಗೆಯಾಗಲಿದೆ.
ವಿಶ್ವಾಸ ಇತ್ತು:
ರೈಲ್ವೆ ಸಚಿವರೇ ಹೇಳಿಕೆ ನೀಡಿರುವುದರಿಂದ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗಕ್ಕೆ ಇರುವ ಎಲ್ಲ ಅಡ್ಡಿಗಳು ನಿವಾರಣೆಯಾದಂತಾಗಿದೆ. ಅಗತ್ಯ ಇರುವ ಎಲ್ಲ ಪ್ರಕ್ರಿಯೆಗಳನ್ನು ರೈಲ್ವೆ ಇಲಾಖೆ ನಡೆಸಿದೆ. ಈ ರೈಲ್ವೆ ಮಾರ್ಗ ಆಗಲಿದೆ ಎಂಬ ವಿಶ್ವಾಸ ಇತ್ತು. ಆಗೇ ಆಗಲಿದೆ ಎನ್ನುತ್ತಾರೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
ಆತಂಕ ನಿವಾರಣೆ: ಈಗ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗಕ್ಕೆ ಇರುವ ಎಲ್ಲ ಆತಂಕವೂ ನಿವಾರಣೆಯಾಗಿದೆ. ಈ ಮಾರ್ಗ ಮಂಜೂರಾಗಿದೆ ಎಂದು ಸಚಿವರು ಹೇಳಿರುವುದು ಸಂತಸಕ್ಕೆ ಕಾರಣವಾಗಿದೆ ಎನ್ನುತ್ತಾರೆ ಹೈಕೋರ್ಟ್ ನ್ಯಾಯವಾದಿ ಆರ್.ಜಿ. ಕೊಲ್ಲೆ.
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಮಂಜೂರು: ರೂಪಾಲಿ ನಾಯ್ಕ ಸಂತಸ
ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ಮಂಜೂರಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಈ ಭಾಗದ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.ಜನತೆಯ ಬಹುಕಾಲದ ಕನಸು ಈ ರೈಲ್ವೆ ಮಾರ್ಗದ್ದಾಗಿತ್ತು. ಈ ರೈಲ್ವೆ ಮಾರ್ಗಕ್ಕಾಗಿ ಹಲವರು ಸುದೀರ್ಘ ಹೋರಾಟ, ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕರ ಒತ್ತಾಸೆಯೂ ಇತ್ತು. ಕೇಂದ್ರ ಸಚಿವರ ಹೇಳಿಕೆಯಿಂದ ಎಲ್ಲರ ಹೋರಾಟಕ್ಕೆ ಜಯ ಸಂದಂತಾಗಿದೆ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆಯ ಪರವಾಗಿ ನಿಂತು ಯೋಜನೆಗೆ ಸಮ್ಮತಿ ಸೂಚಿಸಿದ್ದರು. ಈ ಯೋಜನೆ ಜಾರಿ ಬಗ್ಗೆ ಯಡಿಯೂರಪ್ಪ ಬಳಿ ನಾನೂ ವಿನಂತಿಸಿದ್ದೆ.ಈ ಯೋಜನೆ ಮಂಜೂರಿಗೆ ಕಾರಣರಾದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ರೂಪಾಲಿ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಷ್ಕೃತ ಡಿಪಿಆರ್ನಲ್ಲಿನ ಮುಖ್ಯಾಂಶಗಳು
ಯೋಜನೆಗೆ ₹17,147 ಕೋಟಿ ಅಗತ್ಯ
595 ಹೆಕ್ಟೇರ್ ಬದಲಾಗಿ 585 ಹೆ. ಅರಣ್ಯ ಭೂಮಿ ಬಳಕೆ
ರಾಷ್ಟ್ರೀಯ ಹೆದ್ದಾರಿ–63ರ ಪಕ್ಕದಲ್ಲೇ ಸಾಗಲಿದೆ ದ್ವಿಪಥ ರೈಲು ಮಾರ್ಗ
164.4 ಕಿ.ಮೀ ಉದ್ದದ ಮಾರ್ಗದ ಪೈಕಿ 97 ಕಿ.ಮೀ ಅರಣ್ಯದಲ್ಲಿ ಹಾದುಹೋಗಲಿದೆ
ಅರಣ್ಯದಲ್ಲಿ ಹಾದುಹೋಗುವ ಮಾರ್ಗದಲ್ಲಿ 57 ಸುರಂಗಗಳ ನಿರ್ಮಾಣ
ಯಲ್ಲಾಪುರ–ಸುಂಕಸಾಳ ನಡುವಿನ ಅರಣ್ಯಕ್ಕೆ ಸುರಂಗ 13.89 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣ