ಹುಬ್ಬಳ್ಳಿ: ಕರ್ನಾಟಕದ ಮಹತ್ವದ ಮತ್ತು ವಿವಿಧ ಕಾರಣಕ್ಕೆ ವಿಳಂಬವಾಗುತ್ತಿರುವ ಯೋಜನೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ. ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡವನ್ನು ಸಂಪರ್ಕಿಸುವ ಈ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಸಹ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಅರಣ್ಯ ಪ್ರದೇಶದ ಕಾರಣಕ್ಕೆ ಈ ಯೋಜನೆಗೆ ಹಲವಾರು ವಿಘ್ನಗಳು ಎದುರಾಗಿದ್ದವು. ಸದ್ಯ ಯೋಜನೆ ಕುರಿತು ನೈಋತ್ಯ ರೈಲ್ವೆ ಹೊಸ ವಿಸ್ತೃತ ಯೋಜನಾ ವರದಿಯನ್ನು ತಯಾರು ಮಾಡಿದೆ.
ಮಾಹಿತಿಗಳ ಪ್ರಕಾರ ನೈಋತ್ಯ ರೈಲ್ವೆ ರೈಲ್ವೆ ಮಂಡಳಿಗೆ ಫೆಬ್ರವರಿ 15ರಂದು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಹೊಸ ಡಿಪಿಆರ್ ಸಲ್ಲಿಕೆ ಮಾಡಲಿದೆ. 164 ಕಿ. ಮೀ. ಉದ್ದದ ಯೋಜನೆ ವಿವಿಧ ಕಾರಣಕ್ಕೆ ವಿರೋಧ ಎದುರಿಸಿತ್ತು. ಅಲ್ಲದೇ ರೈಲು ಮಾರ್ಗ ಪಶ್ಚಿಮ ಘಟ್ಟ ಪ್ರದೇಶದ ಮೂಲಕ ಹಾದು ಹೋಗುವ ಕಾರಣ ಯೋಜನೆ ವಿರೋಧಿಸಿ ಹೈಕೋರ್ಟ್ನಲ್ಲಿಯೂ ಅರ್ಜಿ ಸಲ್ಲಿಸಲಾಗಿತ್ತು.
1996-97ರಲ್ಲಿ ಮೊದಲು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಪ್ರಸ್ತಾವನೆ ಸಿದ್ಧವಾಯಿತು. ಈಗ ಮೂರನೇ ಬಾರಿಗೆ ಯೋಜನೆಯ ನಕ್ಷೆಯನ್ನು ಬದಲಾವಣೆ ಮಾಡಿ ಮತ್ತೊಂದು ಡಿಪಿಆರ್ ಸಿದ್ಧಗೊಳಿಸಲಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿಯೇ ಈಗ ರೈಲು ಮಾರ್ಗ ಹಾದು ಹೋಗುವಂತೆ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.
ಈ ಹಿಂದಿನ ಡಿಪಿಆರ್ ಮಾಹಿತಿಯಂತೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕಾಗಿ 595 ಹೆಕ್ಟೇರ್ ಅರಣ್ಯ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕಿತ್ತು. ಅಲ್ಲದೇ ರೈಲು ಮಾರ್ಗ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಆನೆ ಕಾರಿಡಾರ್ ಮೂಲಕ ಸಾಗುತ್ತಿತ್ತು. ಯೋಜನೆ ಕುರಿತು ಮೊದಲು ತಯಾರು ಮಾಡಿದ್ದ ವರದಿ ಅನ್ವಯ 1000 ಹೆಕ್ಟೇರ್ ಭೂಮಿ ಬೇಕು ಎಂದು ಅಂದಾಜಿಸಲಾಗಿತ್ತು.
ಎಫ್ಎಲ್ಎಸ್ ವರದಿಗೆ ಟೆಂಡರ್
2022ರಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಸ್ಥಳಕ್ಕೆ ವನ್ಯಜೀವಿ ರಾಷ್ಟ್ರೀಯ ಮಂಡಳಿಯು (ಎನ್ಬಿಡಬ್ಲ್ಯುಎಲ್) ಭೇಟಿ ನೀಡಿತ್ತು. ಬಳಿಕ ಕರ್ನಾಟಕ ಹೈಕೋರ್ಟ್ ಸೂಚನೆಯಂತೆ ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಿದ ಬಳಿಕ ಈಗ ವಿನ್ಯಾಸ ಬದಲಿಸಿ, ಹೊಸ ಡಿಪಿಆರ್ ತಯಾರು ಮಾಡಲಾಗಿದೆ. ಆದರೆ ಹೊಸ ಯೋಜನೆಗೆ ಎಷ್ಟು ಅರಣ್ಯ ಭೂಮಿ ಅಗತ್ಯವಿದೆ? ಎಂಬುದು ಇನ್ನೂ ಸಹ ಖಚಿತವಾಗಿ ತಿಳಿದುಬಂದಿಲ್ಲ.
ನೈಋತ್ಯ ರೈಲ್ವೆ ಅಧಿಕಾರಿಗಳ ಮಾಹಿತಿಯಂತೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಹೊಸ ಡಿಪಿಆರ್ ತಾಂತ್ರಿಕ ಕೆಲಸಗಳು ಮುಗಿದಿವೆ. ಫೆಬ್ರವರಿ 15ರಂದು ರೈಲ್ವೆ ಬೋರ್ಡ್ಗೆ ಅದು ಸಲ್ಲಿಕೆಯಾಗಲಿದೆ. ಆದರೆ ಎನ್ಬಿಡಬ್ಲ್ಯುಎಲ್ ಒಪ್ಪಿಗೆ ಬಳಿಕ ಅದನ್ನು ಅಂತಿಮಗೊಳಿಸಲಾಗುತ್ತದೆ. ಹೊಸ ವಿನ್ಯಾಸದಂತೆ ಕಡಿಮೆ ಮರಗಳನ್ನು ಯೋಜನೆಗೆ ಕಡಿಯಲಾಗುತ್ತದೆ. ಸದ್ಯ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ರೈಲು ಮಾರ್ಗ ಹಾದು ಹೋಗುತ್ತದೆ.
2024ರ ಡಿಸೆಂಬರ್ನಲ್ಲಿಯೇ ಹೊಸ ಡಿಪಿಆರ್ ಸಲ್ಲಿಕೆ ಮಾಡಬೇಕಿತ್ತು. ಆದರೆ ಎರಡು ತಿಂಗಳು ವಿಳಂಬವಾಗಿದೆ. ರೈಲ್ವೆ ಬೋರ್ಡ್ ಡಿಪಿಆರ್ ಬಗ್ಗೆ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಒಪ್ಪಿಗೆಯನ್ನು ಪಡೆಯಬೇಕಿದೆ. ಆದ್ದರಿಂದ ಡಿಪಿಆರ್ ಸಲ್ಲಿಕೆಯಾದರೂ ಅದಕ್ಕೆ ಒಪ್ಪಿಗೆ ಸಿಗುವುದು ಇನ್ನೂ ವಿಳಂಬವಾಗುವ ನಿರೀಕ್ಷೆ ಇದೆ.
ಹುಬ್ಬಳ್ಳಿ-ಅಂಕೋಲಾ 164 ಕಿ. ಮೀ. ಮಾರ್ಗದಲ್ಲಿ ಹುಬ್ಬಳ್ಳಿ-ಕಲಘಟಗಿ ನಡುವೆ 34 ಕಿ. ಮೀ. ರೈಲು ಹಳಿ ಹಾಕಲಾಗಿದೆ. ಕೆಲವು ದಿನಗಳ ಹಿಂದೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಈ ಯೋಜನೆಯನ್ನು 2027ರ ಒಳಗೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದರು.
ಯೋಜನೆಯಂತೆ ಈ ರೈಲು ಮಾರ್ಗ ಹುಬ್ಬಳ್ಳಿಯಿಂದ ಹೊರಟು ಕಲಘಟಗಿ, ಕಿರವತ್ತಿ, ಯಲ್ಲಾಪುರ, ಇಡಗುಂದಿ ಮೂಲಕ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾವನ್ನು ತಲುಪಲಿದೆ. ಆದರೆ ಅರಣ್ಯ ಪ್ರದೇಶದಲ್ಲಿ ಈ ರೈಲು ಮಾರ್ಗ ಸಾಗಬೇಕಾದ ಕಾರಣಕ್ಕೆ ಯೋಜನೆಗೆ ವಿರೋಧಗಳು ವ್ಯಕ್ತವಾಗುತ್ತಿದ್ದು, ಯೋಜನೆ ಪೂರ್ಣಗೊಳಿಸಲು ವಿಳಂಬವಾಗುತ್ತಿದೆ.