ಬೆಂಗಳೂರು :
ನಿಗಮ ಮಂಡಳಿ ರಚನೆ ಬಗ್ಗೆ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ.
ನಿಗಮ ಮಂಡಳಿಗಳ ನೇಮಕ ಬಗ್ಗೆ ಅವರು ಇಂದು ಬೆಂಗಳೂರಿನಲ್ಲಿ ಮಾತನಾಡಿ, ಕೇವಲ ಹಿರಿಯ ಶಾಸಕರನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಹೊಸದಾಗಿ ಆಯ್ಕೆಯಾದ ಯಾವೊಬ್ಬ ಶಾಸಕರಿಗೆ ಅವಕಾಶವಿಲ್ಲ. ಮೂರ್ನಾಲ್ಕು ಸಲ ಗೆದ್ದ ಶಾಸಕರಿಗೆ ಮಾತ್ರ ಈ ಪಟ್ಟಿಯಲ್ಲಿ ಅವಕಾಶ ನೀಡಲಾಗಿದ್ದು, ನಮ್ಮ ಜಿಲ್ಲೆಯ 2-3 ಶಾಸಕರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಹೇಳಿದರು.
ನಿಗಮ– ಮಂಡಳಿ ನೇಮಕ ವೇಳೆ ಹಿರಿಯ ನಾಯಕರ ಅಭಿಪ್ರಾಯ ಪಡೆಯದ ವಿಚಾರದಲ್ಲಿ ಸಚಿವ ಜಿ. ಪರಮೇಶ್ವರ ಮಾತಿಗೆ ದನಿಗೂಡಿಸಿದ ಅವರು, ಪರಮೇಶ್ವರ ಅವರ ಅಭಿಪ್ರಾಯ ಕೇಳಬೇಕಿತ್ತು. ಎಂಟು ವರ್ಷ ಅವರು ಪಕ್ಷದ ಅಧ್ಯಕ್ಷರಾಗಿದ್ದವರು ಎಂದರು.
ನಿಗಮ– ಮಂಡಳಿಗಳಲ್ಲಿ ಹೊಸಬರಿಗೆ ಅವಕಾಶ ಇಲ್ಲವೆಂದು ಮೊದಲೇ ಹೇಳಿದ್ದಾರೆ. 3–4 ಬಾರಿ ಗೆದ್ದವರಿಗೆ ಅವಕಾಶ ನೀಡಲು ಪಕ್ಷ ಬದ್ದವಾಗಿದೆ. ನಮ್ಮ ಬೆಳಗಾವಿ ಜಿಲ್ಲೆಯಲ್ಲೂ ಹಿರಿಯ ಶಾಸಕರು ಇದ್ದಾರೆ. ಅವರಿಗೂ ನಿಗಮ ಮಂಡಳಿಗಳಲ್ಲಿ ಸ್ಥಾನ ಕೊಟ್ಟೇ ಕೊಡ್ತಾರೆ. ಆದಷ್ಟು ಬೇಗ ನೇಮಕಾತಿಯಾದರೆ ಒಳ್ಳೆಯದು ಎಂದರು.
ಬೆಳಗಾವಿ ಅಧಿವೇಶನದಲ್ಲಿ ಎಂದೂ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಚರ್ಚೆ ಆಗಿಲ್ಲ. ಈ ಬಾರಿಯಾದರೂ ಚರ್ಚೆ ಆಗುತ್ತದೆಯೇ ಎಂದು ನೋಡಬೇಕು ಎಂದರು.