ಮೋದಾಸ (ಗುಜರಾತ್): ಹೊಸ ಮೊಬೈಲ್ ಫೋನ್ ಕೊಡಿಸಲು ಪತಿ ನಿರಾಕರಿಸಿದ ಕಾರಣಕ್ಕೆ 22 ವರ್ಷದ ವಲಸೆ ಕಾರ್ಮಿಕ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ನ ಮೋದಾಸದಲ್ಲಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ಮೃತ ಮಹಿಳೆಯನ್ನು ಊರ್ಮಿಳಾ ಎಂದು ಗುರುತಿಸಲಾಗಿದೆ. ಈ ದಂಪತಿ ಮೂಲತಃ ನೇಪಾಳದವರಾಗಿದ್ದು, ಜೀವನೋಪಾಯಕ್ಕಾಗಿ ಗುಜರಾತ್ಗೆ ಬಂದು ನೆಲೆಸಿದ್ದರು. ಮೋದಾಸದಲ್ಲಿ ಇವರು ‘ಚೈನೀಸ್ ಫುಡ್’ ವ್ಯಾಪಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಊರ್ಮಿಳಾ ಅವರು ತಮಗೆ ಹೊಸ ಮೊಬೈಲ್ ಫೋನ್ ಕೊಡಿಸುವಂತೆ ಪತಿ ಬಳಿ ಕೇಳಿದ್ದರು ಎನ್ನಲಾಗಿದೆ. ಆದರೆ ಆರ್ಥಿಕ ಸಂಕಷ್ಟದ ಕಾರಣ ನೀಡಿ ಪತಿ ಮೊಬೈಲ್ ಕೊಡಿಸಿರಲಿಲ್ಲ.
ಇದರಿಂದ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಇದೇ ವಿಷಯದಿಂದ ಮನನೊಂದ ಮಹಿಳೆ, ಶನಿವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಘಟನೆಯ ಕುರಿತು ಎಲ್ಲಾ ಆಯಾಮಗಳಿಂದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


