ಬೆಳಗಾವಿ: ಅದ್ದೂರಿ ಜೀವನ ನಡೆಸಲು ಹಣ ಮಾಡುವ ಉದ್ದೇಶದಿಂದ ಹಿಂದಿ ಭಾಷೆಯ ಧೂಮ್ ಚಲನಚಿತ್ರದ ಮಾದರಿಯಲ್ಲಿ ಮನೆಕಳ್ಳತನ ಮಾಡುತ್ತಿದ್ದ ಮನೆಗಳ್ಳತನ ಮಾಡುತ್ತಿದ್ದವನನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ನಗರದಲ್ಲಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಳಗಾವಿ ಮಹಾಂತೇಶ ನಗರದಲ್ಲಿ ವಾಸವಿರುವ ಸುರೇಶ ಮಾರುತಿ ನಾಯಿಕ ಬಂಧಿತ. ಆತನಿಂದ 1,280 ಗ್ರಾಂ ಚಿನ್ನಾಭರಣ, 8.5 ಕೆ.ಜಿ. ಬೆಳ್ಳಿ ಆಭರಣ, ರೂ.1.25 ಲಕ್ಷ ನಗದು, ಒಂದು ಥಾರ್ ವಾಹನ ಮತ್ತು ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಯಮಕನಮರಡಿಯಲ್ಲಿ ಅ.22 ರಂದು ವಿಶ್ವನಾಥ ದುಗ್ಗಾಣಿ ಅವರ ಮನೆಯಲ್ಲಿ 1,280 ಚಿನ್ನಾಭರಣ, 8.5 ಕೆ.ಜಿ ಬೆಳ್ಳಿ ಆಭರಣ, ರೂ. 1.25 ಲಕ್ಷ ನಗದು ಕಳ್ಳತನ ಆಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆಗೆ ಯಮಕನಮರಡಿ ಠಾಣೆ ಇನ್ಸ್ಪೆಕ್ಟರ್ ಜಾವೀದ್ ಮುಶಾಪುರಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಮಹತ್ವದ ಸುಳಿವು ಆಧರಿಸಿ ವೈಜ್ಞಾನಿಕವಾಗಿ ತನಿಖೆ ನಡೆಸಿದ ತಂಡ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಈತ ಧೂಮ್ ಸಿನೆಮಾ ಮಾದರಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಕದ್ದ ಹಣದಲ್ಲಿ ದುಬಾರಿ ಬೆಲೆಯ ಥಾರ್ ವಾಹನ, ಎರಡು ಬೈಕ್ ಖರೀದಿಸಿದ್ದಾನೆ. ಐಷಾರಾಮಿ ಜೀವನ ಸಾಗಿಸುವುದು ಈತನ ದಿನಚರಿಯಾಗಿತ್ತು.
ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸುರೇಶ ಮೇಲೆ 21 ಪ್ರಕರಣಗಳಿವೆ. ಶ್ರೀಮಂತರು ವಾಸವಿರುವ, ಅದರಲ್ಲಿಯೂ ಮನೆಯಲ್ಲಿ ಯಾರೂ ಇಲ್ಲದಿರುವುದು, ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲದಿರುವುದನ್ನು ಗಮನಿಸಿ ಈತ ಕೃತ್ಯ ಎಸಗುತ್ತಿದ್ದ ಎಂದು ತಿಳಿಸಿದರು.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಶ್ವನಾಥ ದುಗ್ಗಾಣಿ ಅವರ ಮನೆ ಮಾತ್ರವಲ್ಲ. ಯಮಕನಮರಡಿ, ಮಣಗುತ್ತಿ, ಸಂಕೇಶ್ವರ ಠಾಣೆ ವ್ಯಾಪ್ತಿಯ ಮನೆಗಳಲ್ಲಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಒಟ್ಟು ನಾಲ್ಕು ಮನೆಕಳ್ಳತನ ಪ್ರಕರಣ ಭೇದಿಸಲಾಗಿದೆ ಎಂದು ವಿವರಿಸಿದರು.


