ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳೇ ..
ನೀವು ಬೆಳಗಾವಿಗೆ ಬಂದು ವಿಧಾನ ಮಂಡಲ
ಅಧಿವೇಶನ ನಡೆಸಿದ್ದಕ್ಕೆ ತುಂಬಾ ಧನ್ಯವಾದಗಳು.
ಆದರೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಹಿಂದಿನ ಉದ್ದೇಶ ಸಫಲವಾಗಿದೆಯೇ? ಎಂಬ ಬಗ್ಗೆ ನೀವೇ
ಆತ್ಮವಲೋಕನ ಮಾಡಿಕೊಂಡರೆ ಒಳ್ಕೆಯದು.
2006 ರಲ್ಲಿ ತಾತ್ಕಾಲಿಕ ವ್ಯವಸ್ಥೆಯಲ್ಲಿ ನಡೆದ ಮೊದಲ ಅಧಿವೇಶನಕ್ಕೆ ಐದು ಕೋಟಿ ವೆಚ್ಚವಾದರೆ ಈ 14 ನೆ ಅಧಿವೇಶನಕ್ಕೆ 21 ಕೊ. ರು. ವೆಚ್ಚವಾಗಿದೆ.
ಬೆಳಗಾವಿಯಿಂದ ನಾಲ್ಕೆ ಕಿ. ಮೀ. ಸಮೀಪದಲ್ಲಿ 500 ಕೊ. ರು. ವೆಚ್ಚದಲ್ಲಿ ನಿರ್ಮಾಣಗೊಂಡ ಸುವರ್ಣ ವಿಧಾನ ಸೌಧದ ಮತ್ತು ಸರ್ಕಿಟ್ ಹೌಸ್ ಬಿಟ್ಟು ತಾವು ಜನರ ಬಳಿ ಹೋಗಲೇ ಇಲ್ಲ. ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ವಾಣಿಜ್ಯ ಸಂಘಟನೆಗಳ ಜೊತೆಗೆ ಮಾತುಕತೆಯೂ ನಡೆಯಲೇ ಇಲ್ಲ. ಕೇವಲ ಸಚಿವರು, ಶಾಸಕರ ಜೊತೆ ಉಟೋಪಚಾರಗಳು ಮಾತ್ರ ನಡೆದವು.
ಬೆಳಗಾವಿಯ ಮೇಲಿನ ಕರ್ನಾಟಕದ ಹಕ್ಕುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸುವರ್ಣ ಸೌಧವನ್ನು ಕಟ್ಟಲಾಯಿತಾದರೂ ಅಧಿವೇಶನ ನಡೆದ ಸಂದರ್ಭದಲ್ಲಿ ನಾಡು, ನುಡಿ, ಗಡಿಯ ಬಗ್ಗೆ ಕಿಂಚಿತ್ತೂ ಚರ್ಚೆಯಾಗಲಿಲ್ಲ. ಅಧಿವೇಶನವನ್ನು ಗಡಿಭಾಗದ ಜನರು ದೂರದಲ್ಲಿಯೇ ಕುಳಿತು ಮೂಕ ಪ್ರೇಕ್ಷಕರಂತೆ ನೋಡಿದ್ದು ಒಂದು ದುರಂತವೇ ಸರಿ. ಸರಕಾರ ಇಲ್ಲಿಯ ಜನರ ಬಳಿ ಬರಬೇಕಾಗಿತ್ತು. ಬರಲಿಲ್ಲ. ಜನರ ಸಮಸ್ಯೆಗಳನ್ನು ಆಲಿಸಬೇಕಾಗಿತ್ತು. ಆಲಿಸಲಿಲ್ಲ. ಕನಿಷ್ಠ ಜನತಾ
ದರ್ಶನವನ್ನಾದರೂ ಮಾಡಬೇಕಾಗಿತ್ತು. ಅದನ್ನು ಸಹ ಮಾಡಲಿಲ್ಲ.
ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಒಂದಿಷ್ಟು ಹಳೆಯ ನಿರ್ಧಾರಗಳಿಗೆ ಹೊಸರೂಪ ಕೊಟ್ಟಿದ್ದೀರಿ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ರಚನೆಯ ಬಗ್ಗೆ ಏನನ್ನು ಸಹ ಹೇಳಲಿಲ್ಲ. ಸುವರ್ಣ ಸೌಧಕ್ಕೆ ಬೆಂಗಳೂರಿನ ವಿಧಾನ ಸೌಧದ ಕಚೇರಿಗಳಲ್ಲಿ ಸ್ಥಳಾಂತರದ ಬಗ್ಗೆ ಸರಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬಹುದು ಎಂದು ತಿಳಿದಿದ್ದರೆ ನಮಗೆ ನಿರಾಸೆ ಬಿಟ್ಟು ಏನೂ ಸಿಗಲಿಲ್ಲ!
ಮುಂದಿನ ವರ್ಷ ಬೆಳಗಾವಿಯಲ್ಲಿ ನಡೆಯುವ 15 ನೆ ಅಧಿವೇಶನಕ್ಕೆ ಬನ್ನಿ. ನಿಮಗೆ ಮತ್ತೊಮ್ಮೆ ಸ್ವಾಗತ ಮಾಡಿಯೇ ಮಾಡುತ್ತೇವೆ. ನಮಗೆಲ್ಲ ಮತ್ತೊಮ್ಮೆ ನಿರಾಸೆ ಕಟ್ಟಿಟ್ಟ ಬುತ್ತಿ ಎಂದು ಗೊತ್ತಿದ್ದರೂ ಊರೆಲ್ಲ ಪೋಸ್ಟರ್, ಬ್ಯಾನರ್ ಹಚ್ಚುತ್ತೇವೆ. ಉಟೋಪಚಾರವಂತೂ ಇದ್ದೇ ಇರುತ್ತದೆ.
ಜನರಿಗಾಗಿ, ಜನರ ಪರವಾಗಿ, ಜನರಿಗೋಸ್ಕರ
ಇರುವ ಸರಕಾರ ನಿಮ್ಮ ಸರಕಾರ ಇದೆಯೆಂದು ನಾವು ಭಾವಿಸಿದ್ದೇವೆ. ನೀವು ಮುಂದಿನ ವರ್ಷ ಬರುವಾಗ ಒಂದು ಬದ್ಧತೆಯಿಂದ ಸುವರ್ಣ ಸೌಧವನ್ನು ಪ್ರವೇಶ ಮಾಡುವಿರೆಂಬ ವಿಶ್ವಾಸದೊಂದಿಗೆ ಈ ಬಹಿರಂಗ ಪತ್ರವನ್ನು ಮುಗಿಸುತ್ತೇನೆ.
ವಂದನೆಗಳು
ಅಶೋಕ ಚಂದರಗಿ
ಅಧ್ಯಕ್ಷರು, ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ
ಮೊ. 9620114466


