ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಜಧಾನಿಯಲ್ಲಿ ನಡೆಯುವ ಮುಖ್ಯ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದು, ಸತತ 11ನೇ ಬಾರಿಗೆ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಮುಖ್ಯ ಕಾರ್ಯಕ್ರಮವು ಕೇಂದ್ರ ಸರ್ಕಾರದ ಸಾಧನೆಗಳಿಗೆ ಕನ್ನಡಿ ಹಿಡಿಯುವ ವೇದಿಕೆಯೂ ಆಗಲಿದ್ದು, ಪ್ರಮುಖ ನೀತಿ ಹಾಗೂ ಕಾರ್ಯಕ್ರಮಗಳನ್ನು ಭಾಷಣದಲ್ಲಿ ಪ್ರಕಟಿಸುವ ಸಾಧ್ಯತೆಗಳು ಇವೆ.
ಈ ಹಿಂದೆ ಯುಪಿಎ ಸರ್ಕಾರದ ನೇತೃತ್ವ ವಹಿಸಿದ್ದ ಮನಮೋಹನ್ ಸಿಂಗ್ ಅವರು ಸತತ 10 ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದ್ದರು. ಈಗ 3ನೇ ಅವಧಿಯಲ್ಲಿ ಮೊದಲ ಬಾರಿಗೆ ಧ್ವಜಾರೋಹಣ ಮಾಡುವ ಮೂಲಕ ಪ್ರಧಾನಿ ಅದನ್ನು ಹಿಂದಿಕ್ಕುವರು.
ಈ ಹಿಂದೆ ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರು 17 ಬಾರಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 16 ಬಾರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದರು.
ಗುರುವಾರ ಪ್ರಧಾನಿ ಮೋದಿಯವರ ಭಾಷಣದಲ್ಲಿ ‘ವಿಕಸಿತ ಭಾರತ’ ಚಿಂತನೆ ಕೇಂದ್ರ ಬಿಂದುವಾಗುವ ಸಂಭವವಿದೆ. ಬಾಂಗ್ಲಾದಲ್ಲಿನ ಬಿಕ್ಕಟ್ಟು, ಮುಖ್ಯವಾಗಿ ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಉಲ್ಲೇಖಿಸುವ ಸಾಧ್ಯತೆಗಳೂ ಇವೆ.
ಪ್ರಧಾನಿಯಿಂದ ರಾಷ್ಟ್ರಧ್ವಜಾರೋಹಣ: ಸತತ 11ನೇ ಬಾರಿಗೆ ಮೋದಿಗೆ ಗೌರವ
