ಬೆಳಗಾವಿ : ಹಿರೇಬಾಗೇವಾಡಿ ಟೋಲ್ ನಾಕಾ (ರಾಷ್ಟ್ರೀಯ ಹೆದ್ದಾರಿ)ವನ್ನು ನ.7ರಂದು ಬಂದ್ ಮಾಡಿ ರಸ್ತೆ ತಡೆ ಮಾಡಲಾಗುವುದು ಎಂದು ರೈತ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಒಕ್ಕೊರಲಿನಿಂದ ಹೇಳಿದರು.
ಬೈಲಹೊಂಗಲ ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದ ಆಶ್ವಾರೂಢ ಮೂರ್ತಿ ಎದುರು ಬುಧವಾರ ನಡೆದ 3ನೇ ದಿನದ ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಈ ನಿರ್ಧಾರ ಪ್ರಕಟಿಸಿದರು.
ಬೈಲಹೊಂಗಲದ ರೈತರ ಹೋರಾಟ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಬರಬೇಕು. ಶೀಘ್ರವೇ ಪ್ರತಿ ಟನ್ ಕಬ್ಬಿಗೆ ₹3500 ದರ ನಿಗದಿ ಮಾಡಬೇಕೆಂದು ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಬೇಕೆಂದು ಕರೆ ನೀಡಿದರು.
ಇದೇ ವೇಳೆ ದೂರವಾಣಿ ಮೂಲಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರೈತರೊಂದಿಗೆ ಮಾತನಾಡಿ, ರೈತರ ಹೋರಾಟಕ್ಕೆಬೆಂಬಲ ಸೂಚಿಸುವುದಾಗಿ ಹೇಳಿದರು.
ಕಿತ್ತೂರು ಕರ್ನಾಟಕ ಸೇನೆ ಹಾಗೂ ಪುಣ್ಯಕೋಟಿ ಯುವಕ ಸಂಘ ಪದಾಧಿಕಾರಿಗಳು, ಕಾರ್ಯಕರ್ತರು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕಿತ್ತೂರು ಕರ್ನಾಟಕ ಸೇನೆ ಹಾಗೂ ಪುಣ್ಯಕೋಟಿ ಯುವಕ ಸಂಘ ಪದಾಧಿಕಾರಿಗಳು, ಕಾರ್ಯಕರ್ತರು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಗದ್ದಿಕರವಿನಕೊಪ್ಪದ ಸಚ್ಚಿದಾನಂದ ಅವಧೂತರು, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಕಲಾವಿದ ಸಿ.ಕೆ.ಮೆಕ್ಕೇದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ನೇಗಿಲ ಯೋಗಿ ರೈತ ಸಂಘ ಜಿಲ್ಲಾ ಘಟಕದ ಧ್ಯಕ್ಷ ಶಂಕರ ಬೋಳಣ್ಣವರ, ಬಸನಗೌಡ ಪಾಟೀಲ, ಮಹಾಂತೇಶ ಮತ್ತಿಕೊಪ್ಪ, ಮಲ್ಲಿಕಾರ್ಜುನ ಹುಂಬಿ, ಬೀರಪ್ಪ ದೇಶನೂರ, ಮಹಾಂತೇಶ ಕಮತ, ಸುರೇಶ ಸಂಪಗಾಂವ, ಉದ್ಯಮಿ ಬಾಬುಸಾಬ ಸಂಗೊಳ್ಳಿ, ರಫೀಕ್ ಸಂಗೊಳ್ಳಿ, ಜಗದೀಶ ಬೂದಿಹಾಳ ಸೇರಿದಂತೆ ನೂರಾರು ರೈತರು, ರೈತ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.


