ಬೆಳಗಾವಿ :
ಹಿಪ್ಪರಗಿ ಬ್ಯಾರೇಜಿನಲ್ಲಿ (ಕೃಷ್ಣಾ ನದಿ) ಸಂಗ್ರಹಿತ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡುವ ಹಾಗೂ ನಿರ್ವಹಣೆ ಕುರಿತು ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಅವರ ಅಧ್ಯಕ್ಷತೆಯಲ್ಲಿ ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
ಪ್ರಸ್ತುತ ಹಿಪ್ಪರಗಿ ಬ್ಯಾರೇಜಿನಲ್ಲಿನ ಸಂಗ್ರಹಿತವಾದ ನೀರಿನ ಪ್ರಮಾಣ 5.80 ಟಿ.ಎಂ.ಸಿ ಇದ್ದು, ಡೇಡ್ ಸಂಗ್ರಹಣೆ ಹಾಗೂ ಭಾಷ್ಪಿ ಭವನ ಹಿಡಿದು ಬ್ಯಾರೇಜಿನಲ್ಲಿ ಉಪಯುಕ್ತ ನೀರಿನ ಪ್ರಮಾಣ ಕೇವಲ 5.00 ಟಿಎಂಸಿ ಇರುತ್ತದೆ ಎಂದು ಅಥಣಿಯ ಕ.ನೀ.ನಿ.ನಿ ಅಧೀಕ್ಷಕ ಅಭಿಯಂತರರು ಸಭೆಯಲ್ಲಿ ತಿಳಿಸಿದರು.
ಉಪಯುಕ್ತ ನೀರು ಕುಡಿಯುವ ಉದ್ದೇಶಕ್ಕಾಗಿ ಫೆಬ್ರುವರಿ 2024 ವರೆಗೆ ಅಂದರೆ 100 ದಿವಸಗಳವರೆಗೆ ಮಾತ್ರ ಸಾಕಾಗುತ್ತದೆ. 2024 ರ ಮಾರ್ಚ್ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬನವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಹಿನ್ನಲೆಯಲ್ಲಿ ಹಿಪ್ಪರಗಿ ಬ್ಯಾರೇಜಿನ ನದಿ ಪಾತ್ರದಲ್ಲಿನ ರೈತರ ಪಂಪ್ ಸೆಟ್ ಗಳ ವಿದ್ಯುತ್ ನಿಲುಗಡೆಯನ್ನು ವಾರಕ್ಕೆ 2 ದಿನ ಮಾಡುವ ಸಂದರ್ಭ ಉಂಟಾಗಬಹುದು ಎಂದು ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಆದ್ದರಿಂದ ಸದರಿ ವಿಷಯದ ಕುರಿತು ವಿವರವಾದ ಮಾಹಿತಿಯೊಂದಿಗೆ ಮತ್ತೊಮ್ಮೆ ಸಭೆ ನಡೆಸಿ, ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದರು.