ಬೆಳಗಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಇದು ಕೇವಲ ಒಂದು ಜಾತಿ,ಒಂದು ವರ್ಗಕ್ಕೆ , ಒಂದು ಭಾಷೆ, ಒಂದು ಸಮುದಾಯಕ್ಕೆ ಸೇರಿದ ಕ್ಷೇತ್ರವಲ್ಲ . ಈ ಕ್ಷೇತ್ರ ಇಡಿ ಭಾರತ ದೇಶದ ಧಾರ್ಮಿಕ ಕ್ಷೇತ್ರವಾಗಿದ್ದು, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಸಲ್ಲದು. ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆ.ಎಲ್.ಇ.ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಸರಕಾರವನ್ನು ಆಗ್ರಹಿಸಿದರು.
ಕ್ಷೇತ್ರದ ಬಗ್ಗೆ ಕಳಂಕ ತರುವ ವ್ಯಕ್ತಿಗಳು ನಿರಾಧಾರ ಆರೋಪಗಳನ್ನು ಮಾಡುತ್ತಿದ್ದು, ಅಂತಹ ವ್ಯಕ್ತಿಗಳನ್ನು ತೀವ್ರ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಮಂಗಳವಾರ ಬೆಳಗಾವಿಯಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಬೃಹತ್ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ ಕೊನೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸುವ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆ ಅವರು ಮಾತನಾಡುತ್ತಿದ್ದರು.
ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಸರಕಾರ ಸ್ಪಂಧಿಸುವ ಮೂಲಕ ತನಿಖೆಗಾಗಿ ಎಸ್.ಐ.ಟಿ. ತಂಡವನ್ನು ರಚಿಸಿತ್ತು. ಆದರೆ ಈ ಎಸ್.ಐ.ಟಿ ತಂಡ ನಡೆಸಿದ ತನಿಖೆಯಲ್ಲಿ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ. ಹೀಗಾಗಿ ಕ್ಷೇತ್ರಕ್ಕೆ ಕಳಂಕ ತರುವ ವ್ಯಕ್ತಿಗಳು ಮಾಡಿರುವ ಆರೋಪಗಳು ಸುಳ್ಳಾಗಿದ್ದು, ಇದೊಂದು ಹಿಂದೂ ಧಾರ್ಮಿಕ ಕ್ಷೇತ್ರವನ್ನು ಹತ್ತಿಕ್ಕುವ ಕುತಂತ್ರ ನಡೆಯುತ್ತಿದೆ. ಅದಕ್ಕಾಗಿ ಈ ಘಟನೆಯ ಹಿಂದೆ ಯಾರಿದ್ದಾರೋ ಅವರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಪರಮಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಗುರುಶಾಂತೇಶ್ವರ ಹಿರೇಮಠ, ಹುಕ್ಕೇರಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕ್ಷೇತ್ರವಾಗಿದೆ. ಈ ಕ್ಷೇತ್ರದಿಂದ ಇಂದು ಅನೇಕ ಸಮಾಜಮುಖಿ ಕಾರ್ಯಗಳು ನಡೆದಿವೆ. ರೈತರಿಗೆ ಅನಕೂಲವಾಗುವಂತಹ ಕಾರ್ಯಕ್ರಮಗಳು ನಡೆಯುತ್ತ ಬಂದಿವೆ. ನಿರಂತರ ಅನ್ನ ದಾಸೋಹದ ಮೂಲಕ ತನ್ನ ಸಾಮಾಜಿಕ ಸೇವೆಯನ್ನು ಮುಂದುವರೆಸಿಕೊಂಡು ಬಂದ ಡಾ. ವೀರೇಂದ್ರ ಹೆಗ್ಗಡೆ ಅವರ ಕುಟುಂಬದವರನ್ನು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ದ ನಡೆಯುತ್ತಿರುವ ಷಡ್ಯಂತ್ರವನ್ನು ನಾವೆಲ್ಲ ತಡೆಯಬೇಕಾಗಿದೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಕ್ಷೇತ್ರದ ವಿರುದ್ದ ಪಿತೂರಿ ನಡೆಸುತ್ತಿರುವ ಬಗ್ಗೆ ತೀವ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ ಅವರು , ಮುಂಬರುವ ದಿನಗಳಲ್ಲಿ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆದರೆ ಸಹಿಸುವುದಿಲ್ಲ ಎಂದರು.
ಶಾಸಕ ಅಭಯ ಪಾಟೀಲ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ , ಮಾಜಿ ಸಚಿವ ಅನಿಲ ಬೆನಕೆ, ಮಹಾಂತೇಶ ದೊಡಗೌಡರ, ಜಗದೀಶ ಹಿರೇಮನಿ ಅವರು ಮಾತನಾಡಿ, ಅನಾಮಿಕ ಹೆಸರಿನಲ್ಲಿ ಓರ್ವ ವ್ಯಕ್ತಿ ಶ್ರೀ ಕ್ಷೇತ್ರದ ವಿರುದ್ದ ಅಪಪ್ರಚಾರ ಮಾಡುತ್ತಿರುವುದು ಖಂಡನೀಯವಾಗಿದೆ. ಆ ವ್ಯಕ್ತಿ ಯಾರು, ಯಾರ ಕುಮ್ಮಕ್ಕಿನಿಂದ ಅವನು ಈ ಕಾರ್ಯಕ್ಕೆ ಕೈ ಹಾಕಿದ್ದಾನೆ. ಎಲ್ಲ ಸತ್ಯಾಂಶ ಹೊರ ಬರಬೇಕಾಗಿದೆ. ಅನಾಮಿಕ ವ್ಯಕ್ತಿಯನ್ನು ಮಂಪರು ಪರೀಕ್ಷೇಗೆ ಒಳಪಡಿಸಿ ಸತ್ಯವನ್ನು ಬಯಲಿಗೆಳೆಯಬೇಕಾಗಿದೆ. ಸರಕಾರ ಈ ಕುರಿತು ಗಂಭೀರವಾಗಿ ಆಲೋಚನೆ ಮಾಡಬೇಕು. ಇಲ್ಲದಿದ್ದಲ್ಲಿ ಹಿಂದೂ ಸಮಾಜದ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾದಿತು. ಎಂದು ಎಚ್ಚರಿಕೆ ನೀಡಲಾಯಿತು. ತದನಂತರ ಜಿಲ್ಲಾಧಿಕಾರಿ ಮೊಹ್ಮದ ರೋಷನ್ ಅವರಿಗೆ ಎಲ್ಲ ಮಠಾಧೀಶರ ಸಮ್ಮುಖದಲ್ಲಿ ರಾಷ್ಟ್ರಪತಿಗಳಿಗೆ ಮನವಿ ರವಾನಿಸಲಾಯಿತು.
ಮೌನ ಮೆರವಣೀಗೆಯು ಮಂಗಳವಾರ 12 ಗಂಟೆಗೆ ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಿಂದ ಪ್ರಾರಂಭಗೊಂಡು ಕಿರ್ಲೋಸ್ಕರ ರಸ್ತೆ, ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಕಾಕತಿವೇಸ , ರಾಣಿ ಚೆನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಅಲ್ಲಿ ಮನವಿಯನ್ನು ಅರ್ಪಿಸಲಾಯಿತು. ಇಂದಿನ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಪರಮಪೂಜ್ಯ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಸಿದ್ಧಸಂಸ್ಥಾನ ಮಠ, ನಿಡಸೋಸಿ ಪರಮಪೂಜ್ಯ ಶ್ರೀ ಸಂಪಾದನಾ ಮಹಾಸ್ವಾಮಿಗಳು, ಸಂಪಾದನಾ ಚರಮೂರ್ತಿಮಠ, ಚಿಕ್ಕೋಡಿ. .ಪರಮಪೂಜ್ಯಶ್ರೀ ನೀಲಕಂಠ ಮಹಾಸ್ವಾಮಿಗಳು ಮಹಾಂತದುರದುಂಡೇಶ್ವರ ಮಠ, ಮುರಗೋಡ. ಪರಮಪೂಜ್ಯಶ್ರೀ ಪ್ರಭುನೀಲಕಂಠ ಮಹಾಸ್ವಾಮಿಗಳು, ಮೂರುಸಾವಿರ ಮಠ, ಬೈಲಹೊಂಗಲ. ಪರಮಪೂಜ್ಯಶ್ರೀ ಗಂಗಾಧರ ಮಹಾಸ್ವಾಮಿಗಳು, ಮಡಿವಾಳೇಶ್ವರ ಮಠ, ಹೊಸೂರ..ಪರಮಪೂಜ್ಯಶ್ರೀ ಮುರುಘೇಂದ್ರ ಮಹಾಸ್ವಾಮಿಗಳು, ಸೋಮಶೇಖರ ಮಠ, ಮುನವಳ್ಳಿ. ಪರಮಪೂಜ್ಯಶ್ರೀ ಶಿವಸೋಮೇಶ್ವರ ಶಿವಾಚಾರ್ಯರು, ಮುಕ್ತಿಮಠ, ಭೂತರಾಮನಹಟ್ಟಿ ,ಪರಮಪೂಜ್ಯ ಶಿವಾನಂದ ಭಾರತಿ ಮಹಾಸ್ವಾಮಿಗಳು, ಸಾಧುಸಂಸ್ಥಾನಮಠ, ಇಂಚಲ. ಪರಮಪೂಜ್ಯ ಶಿವಪುತ್ರ ಮಹಾಸ್ವಾಮಿಗಳು, ಸಿದ್ಧಾರೂಢಮಠ, ಚಿಕ್ಕಮುನವಳ್ಳಿ. ಪರಮಪೂಜ್ಯಶ್ರೀ ಶಿವಮೂರ್ತಿ ಸ್ವಾಮಿಜೀ ಆರಳಿಕಟ್ಟಿ, ಪರಮಪೂಜ್ಯಶ್ರೀ ರುದ್ರಕೇಸರಿಮಠ ಸ್ವಾಮೀಜಿ ಹಿಂಡಲಗಾ, ಪರಮಪೂಜ್ಯಶ್ರೀ ಶಿವಾನಂದಶಾವಾಚಾರ್ಯ ಸ್ವಾಮೀಜಿ ಮುತ್ನಾಳ, ಪರಮಪೂಜ್ಯಶ್ರೀ ಶಿವನಾಂದ ಸ್ವಾಮೀಜಿ ನಿಲಜಗಿ, ಪರಮಪೂಜ್ಯಶ್ರೀ ಬಡೆಕೊಳ್ಳಮಠ , ಪರಮಪೂಜ್ಯಶ್ರೀ ಚಂದ್ರಶೇಖರ ಸಾಮೀಜಿ ಹುಕೇರಿಮಠ , ವಿನಾಯಕ ನಗರ, ಹಿಂಡಲಗಾ ಹಾಗೂ ಇನ್ನಿತರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಈ ಮೌನ ಪ್ರತಿಭಟನೆ ನಡೆಯಿತು.
ಮಾಜಿ ಶಾಸಕ ಸಂಜಯ ಪಾಟೀಲ, ಡಾ.ರವಿ ಪಾಟೀಲ ,ಮುರುಘೇಂದ್ರ ಪಾಟೀಲ,ಗುರು ಮೆಟಗುಡ್ಡ, ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ,ಭರತೇಶ ಶಿಕ್ಷಣ ಸಂಸ್ಥೆಯ ವಿನೋದ ದೊಡ್ಡಣ್ಣವರ, ಪ್ರಮೋದ ಕೋಚೇರಿ ,ಎಂ.ಬಿ.ಝೀರಲಿ, ಬಿಜೆಪಿ ಜಿಲಾಧ್ಯಕ್ಷ ಸುಭಾಷ ಪಾಟೀಲ ಸೇರಿದಂತೆ ಇನ್ನಿತರ ಸಮಾಜದ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.