ಬೆಂಗಳೂರು : ಹಿಂಬಾಕಿ ಪಾವತಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಂಗಳವಾರ(ಆಗಸ್ಟ್ 5 )ದಿಂದ ನಡೆಸಲು ಉದ್ದೇಶಿಸಿರುವ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ಹೈಕೋರ್ಟ್ ಒಂದು ದಿನದ ಮಟ್ಟಿಗೆ ಒಂದು ದಿನದ ಮಟ್ಟಿಗೆ ಮುಂದೂಡುವಂತೆ ನಿರ್ದೇಶನ ನೀಡಿದೆ. ಸೋಮವಾರ ಮುಖ್ಯಮಂತ್ರಿ ಮತ್ತು ಸಾರಿಗೆ ಸಿಬ್ಬಂದಿ ನಡುವೆ ನಡೆದ ಸಂಧಾನ ಸಭೆಯ ವಿವರವನ್ನು ಮಂಗಳವಾರ ನ್ಯಾಯಾಲಯದ ಮುಂದೆ ಇರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಬೆಂಗಳೂರಿನ ಜೆ. ಸುನಿಲ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ಎಂ ಜಿ ಎಸ್ ಕಮಲ್ ಅವರ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ರಾಜ್ಯ ಸರ್ಕಾರವು ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ 2013 (ಎಸ್ಮಾ) ಅಡಿ ಜುಲೈ 14ರಿಂದ ಅನ್ವಯಿಸುವಂತೆ ಮುಷ್ಕರಕ್ಕೆ ನಿಷೇಧ ವಿಧಿಸಿದೆ. ಅದಾಗ್ಯೂ, ಸಾರಿಗೆ ನೌಕರರು ನಾಳೆಯಿಂದ ಮುಷ್ಕರ ಹೂಡಲು ನಿರ್ಧರಿಸಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಭಾರಿ ಸಮಸ್ಯೆಯಾಗಲಿದೆ. ಸಾರಿಗೆ ನೌಕರರ ಮತ್ತು ಸಕ್ಷಮ ಪ್ರಾಧಿಕಾರದ ನಡುವೆ ಒಮ್ಮತ ಮೂಡಿಸಲು ಉನ್ನತಮಟ್ಟದ ಸಭೆಯನ್ನು ನಡೆಸಲು ಆದೇಶಿಸಬೇಕು. ಮುಷ್ಕರ ನಡೆಸಲು ಸಿಬ್ಬಂದಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಸಾರಿಗೆ ಇಲಾಖೆಯ ಪರ ವಕೀಲರು, “ಕಾರ್ಮಿಕ ಸಂಧಾನ ಅಧಿಕಾರಿ ಸಮ್ಮುಖದಲ್ಲಿ ಸಂಧಾನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ನಡುವೆ, ಸಾರಿಗೆ ಇಲಾಖೆ ಕಾರ್ಯದರ್ಶಿ, ಸಚಿವರು ಸಭೆ ನಡೆಸಿದ್ದಾರೆ. ಈಗ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಸಾರಿಗೆ ಸಿಬ್ಬಂದಿಯೊಂದಿಗೆ ಸಭೆ ನಡೆದಿದೆ. ಕಾರ್ಮಿಕ ನ್ಯಾಯ ಮಂಡಳಿಯಲ್ಲಿ ಆಗಸ್ಟ್ 7ರಂದು ವಿಚಾರಣೆ ನಿಗದಿಯಾಗಿದೆ. ಹೀಗಾಗಿ, ಕನಿಷ್ಠ ಎರಡು ದಿನದ ಮಟ್ಟಿಗೆ ವಿಚಾರಣೆ ಮುಂದೂಡಬೇಕು” ಎಂದು ಮನವಿ ಮಾಡಿದರು.
“ಸಾರಿಗೆ ನೌಕರರ ವೇತನ ಪರಿಷ್ಕರಣೆಯನ್ನು ನಾಲ್ಕು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಕೋವಿಡ್ ಕಾರಣಕ್ಕಾಗಿ ಇದುವರೆಗೆ ವೇತನ ಪರಿಷ್ಕರಣೆ ನಡೆದಿಲ್ಲ. ಕೋವಿಡ್ ಕಾಲದಲ್ಲಿ ವಜಾಗೊಂಡಿದ್ದ ಬಹುತೇಕ ನೌಕರರನ್ನು ಮರಳಿ ಸೇವೆಗೆ ಸೇರಿಸಿಕೊಳ್ಳಲಾಗಿದೆ. ಈಗ ಅವರು ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಕೋರುತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಇದು ಅಸಾಧ್ಯದ ಮಾತು. ಈ ನಿಟ್ಟಿನಲ್ಲಿ ಸಂಧಾನ ಸಭೆ ನಿರಂತರವಾಗಿ ನಡೆಯುತ್ತಿರುವ ನಡುವೆಯೇ ಮುಷ್ಕರಕ್ಕೆ ಕರೆ ನೀಡಲಾಗಿದೆ” ಎಂದು ತಿಳಿಸಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಮುಖ್ಯಮಂತ್ರಿಯವರು ಸಭೆ ನಡೆಸುತ್ತಿದ್ದಾರೆ. ಅಡ್ವೊಕೇಟ್ ಜನರಲ್ ಅವರು ದೆಹಲಿ ಪ್ರವಾಸದಲ್ಲಿದ್ದಾರೆ. ಹೀಗಾಗಿ, ಅರ್ಜಿ ವಿಚಾರಣೆ ಮುಂದೂಡಬೇಕು” ಎಂದು ಕೋರಿದರು.
ಇದನ್ನು ಆಲಿಸಿದ ಪೀಠವು “ಸರ್ಕಾರ ಮತ್ತು ಸಾರಿಗೆ ಇಲಾಖೆಯ ನಡುವೆಯೇ ಹೊಂದಾಣಿಕೆ ಇಲ್ಲವೇ ಎಂದು ಮೌಖಿಕವಾಗಿ ಪ್ರಶ್ನಿಸಿತು. ಅಂತಿಮವಾಗಿ, ಮುಖ್ಯಮಂತ್ರಿ ಮತ್ತು ಸಾರಿಗೆ ಸಿಬ್ಬಂದಿಯ ನಡುವೆ ಸೋಮವಾರ ನಡೆದ ಸಭೆಯ ನಿರ್ಧಾರಗಳನ್ನು ಸಲ್ಲಿಸಬೇಕು. ಸಾರ್ವಜನಿಕರಿಗೆ ಸಮಸ್ಯೆಯಾಗುವುದರಿಂದ ಒಂದು ದಿನದ ಮಟ್ಟಿಗೆ ಮುಷ್ಕರವನ್ನು ಪ್ರತಿಭಟನಾಕಾರರು ಮುಂದೂಡಬೇಕು ಎಂದು ನಿರ್ದೇಶಿಸಿತು. ಹಾಗೂ ನ್ಯಾಯಾಲಯವು ರಾಜ್ಯ ಸರ್ಕಾರ, ಸಾರಿಗೆ ಇಲಾಖೆ, ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ಆ.6ಕ್ಕೆ ಮುಷ್ಕರ?
ಆಗಸ್ಟ್ 6ರ ಬುಧವಾರ ಮುಷ್ಕರ ನಡೆಯುವ ಬಗ್ಗೆ ಸಾರಿಗೆ ಇಲಾಖೆಗೆ ಸುಳಿವು ಸಿಕ್ಕಿದ್ದು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಇಲಾಖೆ ಮುಂದಾಗಿದೆ.
ಖಾಸಗಿ ಬಸ್ ಅಸೊಸಿಯೇಶನ್ಗಳೊಂದಿಗೆ ಚರ್ಚೆ ನಡೆಸಿರುವ ಇಲಾಖೆಯು ಬಸ್ಗಳನ್ನು ಒದಗಿಸಲು ಕೋರಿಕೊಂಡಿದೆ.
’11 ಸಾವಿರ ಬಸ್ಗಳನ್ನು ಆ.6ರಂದು ಒದಗಿಸಲು ಅಧಿಕಾರಿಗಳು ಕೇಳಿದ್ದಾರೆ. ಅದರಂತೆ ನಾವು ಬಸ್ಗಳನ್ನು ಒದಗಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮ ತಿಳಿಸಿದ್ದಾರೆ.