ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಮೇ 17ರಿಂದ ಮುಂದುವರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ನಿರ್ಧರಿಸಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಫೈನಲ್ ಪಂದ್ಯವು ಜೂನ್ 3 ರಂದು ನಿಗದಿಯಾಗಿದೆ.
ಗಡಿಯಲ್ಲಿ ಸಂಘರ್ಷದ ವೇಳೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಬಹುದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಮೇ 8ರಂದು ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಬ್ಲ್ಯಾಕ್ಔಟ್ ಮಾಡಿ ಅರ್ಧಕ್ಕೇ ನಿಲ್ಲಿಸಲಾಗಿತ್ತು. ನಂತರ ಬಿಸಿಸಿಐ ಟೂರ್ನಿಯನ್ನು ಒಂದು ವಾರ ಸ್ಥಗಿತಗೊಳಿಸಿತ್ತು.
‘ಟಾಟಾ ಐಪಿಎಲ್ 2025 ಪುನರಾರಂಭಿಸುವುದಾಗಿ ಪ್ರಕಟಿಸಲು ಬಿಸಿಸಿಐ ಸಂತಸಪಡುತ್ತಿದೆ. ಸರ್ಕಾರ, ಭದ್ರತಾ ಸಂಸ್ಥೆಗಳು ಮತ್ತು ಪ್ರಮುಖ ಭಾಗಿದಾರರ ಜೊತೆ ಸಮಾಲೋಚಿಸಿದ ಬಳಿಕ ಮಂಡಳಿಯು ಈ ಆವೃತ್ತಿಯ ಉಳಿದ ಪಂದ್ಯಗಳನ್ನು ನಡೆಸಲು ನಿರ್ಧರಿಸಿದೆ’ ಎಂದು ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಮೇ 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ರೈಡರ್ಸ್ ನಡುವಣ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಲೀಗ್ನ ಉಳಿದ ಪಂದ್ಯಗಳು ಬೆಂಗಳೂರು, ಜೈಪುರ, ದೆಹಲಿ, ಲಖನೌ, ಅಹಮದಾಬಾದ್ ಮತ್ತು ಮುಂಬೈನಲ್ಲಿ ನಡೆಯಲಿವೆ. ಲೀಗ್ ಪಂದ್ಯಗಳ ಸ್ಥಳಗಳನ್ನು ನಂತರ ತಿಳಿಸಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.
ಆರು ನಗರಗಳಲ್ಲಿ 17 ಪಂದ್ಯಗಳು ನಡೆಯಬೇಕಿವೆ. ಎರಡು ಭಾನುವಾರ ಡಬಲ್ ಹೆಡರ್ (ಎರಡು ಪಂದ್ಯಗಳು) ನಡೆಯಲಿವೆ.