ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ)ವು 27 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೇರಲು ಸಿದ್ಧತೆ ನಡೆಸಿದೆ. ದೆಹಲಿಯ ವಿದಾನಸಭೆಯ ಒಟ್ಟು 70 ಸ್ಥಾನಗಳಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ದೆಹಲಿಯಲ್ಲಿ ತನ್ನ ಅಧಿಕಾರದ ʼಬರʼವನ್ನು ನೀಗಿಸಿದೆ.
ಬಿಜೆಪಿಯು ಚುನಾವಣೆ ವೇಳೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹಾಗೂ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಾರಾಗಬಹುದು ಎಂಬುದಕ್ಕೆ ಇಂದಿನವರೆಗೂ ಯಾವುದೇ ಸ್ಪಷ್ಟ ಸುಳಿವು ಸಿಕ್ಕಿಲ್ಲ. ದೆಹಲಿ ಬಿಜೆಪಿ ಮುಖ್ಯಸ್ಥ ಸಚದೇವ ಅವರು ಪಕ್ಷದ ಕೇಂದ್ರ ನಾಯಕತ್ವವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಶನಿವಾರ ಹೇಳಿದ್ದಾರೆ.
ಬಿಜೆಪಿಯು ತನ್ನ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಬಾಯ್ಬಿಡದಿದ್ದರೂ, ದೆಹಲಿಯ ಉನ್ನತ ಹುದ್ದೆಗೆ ಪಕ್ಷವು ಪರಿಗಣಿಸಬಹುದಾದ ಐದು ಸಂಭಾವ್ಯ ಹೆಸರುಗಳು ಈಗ ಮುನ್ನೆಲೆಗೆ ಬಂದಿದೆ.
ಪರ್ವೇಶ ಸಾಹಿಬ್ ಸಿಂಗ್ ವರ್ಮಾ
ಮಾಜಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ನವದೆಹಲಿ ಕ್ಷೇತ್ರದಲ್ಲಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ ನಂತರ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರರಾದ ಪರ್ವೇಶ ವರ್ಮಾ ಅವರು ಕೇಜ್ರಿವಾಲ್ ಅವರ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜೇಂದರ ಗುಪ್ತಾ
ಹಿರಿಯ ಬಿಜೆಪಿ ನಾಯಕ ವಿಜೇಂದರ ಗುಪ್ತಾ ದೆಹಲಿ ಬಿಜೆಪಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಎಎಪಿ (AAP) ಪ್ರಾಬಲ್ಯದ ಹೊರತಾಗಿಯೂ 2015 ಮತ್ತು 2020 ಎರಡು ಬಾರಿಯೂ ಸತತವಾಗಿ ರೋಹಿಣಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಗುಪ್ತಾ ಅವರು ದೆಹಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ, ದೆಹಲಿ ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿರುವ ಇವರು ಪಕ್ಷದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.
ಸತೀಶ ಉಪಾಧ್ಯಾಯ
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಸತೀಶ ಉಪಾಧ್ಯಾಯ ಅವರು, ದೆಹಲಿ ಯುವ ಮೋರ್ಚಾದ ಮುಖ್ಯಸ್ಥರಾಗಿ ಮತ್ತು ಎನ್ಡಿಎಂಸಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಆಡಳಿತಾತ್ಮಕ ಅನುಭವದ ಜೊತೆಗೆ, ಪಕ್ಷದ ಸಂಘಟನೆಯೊಳಗೆ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ, ಮಧ್ಯಪ್ರದೇಶದ ಸಹ-ಪ್ರಭಾರಿಯಾಗಿದ್ದರು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.
ಆಶಿಶ್ ಸೂದ್
ಆಶಿಶ್ ಸೂದ್ ಬಿಜೆಪಿಯ ಪಂಜಾಬಿ ಮುಖ, ಕೌನ್ಸಿಲರ್ ಆಗಿದ್ದಾರೆ ಮತ್ತು ದೆಹಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಪ್ರಸ್ತುತ ಗೋವಾದ ಉಸ್ತುವಾರಿ ಮತ್ತು ಜಮ್ಮು ಮತ್ತು ಕಾಶ್ಮೀರದ ಸಹ-ಪ್ರಭಾರಿಯಾಗಿದ್ದಾರೆ. ಅವರು ಕೇಂದ್ರ ನಾಯಕರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ ಮತ್ತು ಡಿಯು ಅಧ್ಯಕ್ಷರೂ ಆಗಿದ್ದರು.
ಜಿತೇಂದ್ರ ಮಹಾಜನ್
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ಗೆ ನಿಕಟವಾಗಿರುವ ಜಿತೇಂದ್ರ ಮಹಾಜನ್ ಅವರು ಮೂರನೇ ಬಾರಿಗೆ ಶಾಸಕರಾಗಿದ್ದಾರೆ. ಮತ್ತು ಸರಿತಾ ಸಿಂಗ್ ಅವರನ್ನು ಸೋಲಿಸಿ ರೋಹ್ತಾಸ್ ನಗರ ಕ್ಷೇತ್ರವನ್ನು ಗೆದ್ದಿದ್ದಾರೆ. ಸಂಘಟನೆಯಲ್ಲಿ ಅಪಾರ ಅನುಭವವಿದೆ.
ಹರೀಶ ಖುರಾನಾ
ಬಿಜೆಪಿಯ ಹರೀಶ ಖುರಾನಾ ಅವರು ತಮ್ಮ ಚೊಚ್ಚಲ ಚುನಾವಣೆಯಲ್ಲಿ ಎಎಪಿಯ ಶಿವಚರಣ ಗೋಯೆಲ್ ಅವರನ್ನು ಸೋಲಿಸಿದ್ದಾರೆ. ಖುರಾನಾ 11,000 ಮತಗಳಿಂದ ಗೆದ್ದಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಮದನಲಾಲ ಖುರಾನಾ ಅವರ ಪುತ್ರ. ಅವರು ಬಿಜೆಪಿಯ ದೆಹಲಿ ಘಟಕದಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ, ಕಾರ್ಯದರ್ಶಿಯಾಗಿ, ಸಾರ್ವಜನಿಕ ಸಂಪರ್ಕ ಕೋಶದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ.