ಬೆಂಗಳೂರು: ಗರ್ಭಪಾತಕ್ಕೆ ಬಳಸುವ ಎಂಟಿಪಿ (ಮಿಸಪ್ರೊಸ್ಟೋಲ್ 800 ಎಂ.ಜಿ ಹಾಗೂ ಮೈಫೆಪ್ರೊಸ್ಟೋನ್ 200 ಎಂ.ಜಿ ಮಾತ್ರೆ) ಕಿಟ್ಗಳು ಅವ್ಯಾಹತವಾಗಿ ಮಾರಾಟ ಆಗುತ್ತಿರುವುದು ಹಾಗೂ ಹೆಣ್ಣು ಭ್ರೂಣ ಹತ್ಯೆಗೆ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಎಂಟಿಪಿ ಕಿಟ್ ಶೆಡ್ಯೂಲ್-ಎಚ್ ಗೆ ಸೇರಿದ್ದು, ಗರ್ಭಪಾತಕ್ಕೆ ಬಳಕೆಯಾಗುವ ಹಿನ್ನೆಲೆಯಲ್ಲಿ ಮಾತ್ರೆಗಳನ್ನು ಕಡ್ಡಾಯವಾಗಿ ವೈದ್ಯರ ಸಲಹೆ ಮೇರೆಗೆ ನೋಂದಾಯಿತ ಔಷಧ ಅಂಗಡಿಗಳು ಮಾತ್ರ ಮಾರಾಟ ಮಾಡಬೇಕು. ಆದರೆ ಔಷಧಗಳು ಸುಲಭವಾಗಿ ಔಷಧಿ ಅಂಗಡಿಗಳಲ್ಲಿ, ನೋಂದಾಯಿತವಲ್ಲದ ಆಸ್ಪತ್ರೆಗಳಲ್ಲಿ ಮತ್ತು ನಕಲಿ ವೈದ್ಯರುಗಳ ಬಳಿ ಲಭ್ಯವಾಗುತ್ತಿವೆ. ಇದು ಭ್ರೂಣ ಹತ್ಯೆ, ಹೆಣ್ಣು ಭ್ರೂಣ ಹತ್ಯೆಗೆ ನೆರವು ನೀಡುತ್ತಿದೆ. ಹೀಗಾಗಿ ಇದನ್ನು ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.