ನವದೆಹಲಿ: ಪಕ್ಷದ ಆಂತರಿಕ ವಿಷಯಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚಿಸುವ ಮೂಲಕ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ ಎಂದು ಆರೋಪಿಸಿರುವ ಭಾರತೀಯ ಜನತಾ ಪಕ್ಷದ ಕೇಂದ್ರ ಶಿಸ್ತು ಸಮಿತಿಯು, ಶಾಸಕರಾದ ಶಿವರಾಮ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರಿಗೆ ಕಾರಣ ಕೇಳಿ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ನೋಟಿಸ್ ಜಾರಿ ಮಾಡಿದ್ದು, ‘ಪಕ್ಷದ ನಿಯಮ ಉಲ್ಲಂಘಿಸಿರುವ ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬುದನ್ನು ನೋಟಿಸ್ ತಲುಪಿದ 72 ಗಂಟೆಯೊಳಗೆ ಉತ್ತರಿಸಬೇಕು. ಕಾಲಮಿತಿಯೊಳಗೆ ಉತ್ತರಿಸದಿದ್ದಲ್ಲಿ, ಹೇಳಲು ಏನೂ ಇಲ್ಲವೆಂದು ಭಾವಿಸಿ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.
‘ರಾಜಕೀಯ ಪಕ್ಷದಲ್ಲಿ ಅಶಿಸ್ತಿಗೆ ಕಾಲಕಾಲಕ್ಕೆ ಔಷಧಿ ನೀಡಬೇಕು. ಆದರೆ, ಈಗ ಬಿಜೆಪಿಯಲ್ಲಿ ಔಷಧಿ ನೀಡುವ ಸಮಯ ಮೀರಿದೆ. ಇಡೀ ಪಕ್ಷ ಅಶಿಸ್ತಿನಿಂದ ಕೂಡಿದೆ. ಈಗ ಬಿಜೆಪಿಯಲ್ಲಿ ನಾಯಕರಿಲ್ಲ, ಪಕ್ಷವಾಗಿಯೂ ಉಳಿದಿಲ್ಲ. ಪಂಗಡಗಳಿಂದ ತುಂಬಿಕೊಂಡಿದೆ’ ಎಂದು ಶಿವರಾಮ ಹೆಬ್ಬಾರ ಅವರು ಇತ್ತೀಚೆಗೆ ಹೇಳಿದ್ದರು.
ಇವರಿಗೂ ನೋಟೀಸ್ :
ಪಕ್ಷದ ಅಂತರಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಿದ್ದಕ್ಕಾಗಿ ರಾಜ್ಯದ ಹಿರಿಯ ನಾಯಕರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಹರಿಹರ ಶಾಸಕ ಬಿ.ಪಿ. ಹರೀಶ ಅವರಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.