ಬೆಳಗಾವಿ :
ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತ ಹಾಗೂ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.
ಎಸ್ಸಿ ಮೋರ್ಚಾ ಹಾಗೂ ಬಿಜೆಪಿ ಕಾರ್ಯಕರ್ತರಾಗಿರುವ ಪೃಥ್ವಿ ಸಿಂಗ್(55) ಮೇಲೆ ಚಾಕು ಇರಿತವಾಗಿ ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳ್ಳಿ ಅವರ ಆಪ್ತರಿಂದ ಪೃಥ್ವಿ ಸಿಂಗ್ ಮೇಲೆ ಹಲ್ಲೆ ನಡೆದಿರುವ ಬಗ್ಗೆ ವಿಡಿಯೋ ಮಾಡಿ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ವಿರುದ್ಧ ಆರೋಪ ಮಾಡಲಾಗಿದೆ. ಚನ್ನರಾಜ್ ಹಟ್ಟಿಹೊಳಿ ಅವರ ಆಪ್ತರು ಪೃಥ್ವಿ ಸಿಂಗ್ ಜೊತೆಗೆ ಮಾತನಾಡುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ.
ಘಟನೆಯಲ್ಲಿ ಪೃಥ್ವಿ ಸಿಂಗ್ ಅವರ ಕೈ ಹಾಗೂ ಬೆನ್ನಿನ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಖಾಸಗಿ ಆಸ್ಪತ್ರೆಗೆ ಪೃಥ್ವಿ ಸಿಂಗ್ ಅವರನ್ನು ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಭೇಟಿ ನೀಡಿದ್ದಾರೆ. ಈ ಚಾಕು ಇರಿತ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಪೃಥ್ವಿ ಸಿಂಗ್ ಹಲ್ಲೆ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಒಂದು ದಾಖಲೆ ಸಲುವಾಗಿ ಅವರ ಮನೆಗೆ ನಮ್ಮ ಕಡೆಯವರು ಹೋಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಮ್ಮ ಕಡೆಯವರು ಆತನೊಂದಿಗೆ ಮಾತನಾಡುವಾಗ ಆತ ಕೇಸರಿ ಬಣ್ಣದ ಟೀ ಶರ್ಟ್ ಹಾಕಿದ್ದು ಸೆರೆಯಾಗಿದೆ. ಆದರೆ ರಕ್ತ ಅಂಟಿಕೊಂಡಿದ್ದ ಬಿಳಿ ಬಣ್ಣದ ಅಂಗಿಯನ್ನು ಧರಿಸಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಈತ ದುರದ್ದೇಶಪೂರ್ವವಾಗಿ ಆರೋಪ ಮಾಡುತ್ತಿರುವುದು ಸ್ಪಷ್ಟವಾಗಿದೆ. ಪೊಲೀಸರು ತನಿಖೆ ನಡೆಸಿ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುವುದು ಪತ್ತೆ ಹಚ್ಚಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸ್ಪಷ್ಟನೆ ನೀಡಿದ್ದಾರೆ