ಬ್ರಹ್ಮಾವರ :
ಸಣ್ಣಪುಟ್ಟ ವ್ಯಾಜ್ಯಗಳನ್ನು ಕೆಳಹಂತದ ಕೋರ್ಟ್ ನಲ್ಲೆ ಇತ್ಯರ್ಥಗೊಳಿಸುವ ಮೂಲಕ ನ್ಯಾಯಾಧೀಶರು ಹಾಗೂ ವಕೀಲರು ಬಡ ಕಕ್ಷಿದಾರರ ಹಿತ ಕಾಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಬ್ರಹ್ಮಾವರದಲ್ಲಿ ನೂತನವಾಗಿ ನಿರ್ಮಿಸಲಾದ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ಕೋರ್ಟ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಇಡೀ ವಿಶ್ವಕ್ಕೆ ನಮ್ಮ ದೇಶದ ಕಾನೂನು ಮಾದರಿಯಾಗಿದ್ದು, ಸಣ್ಣಪುಟ್ಟ ವ್ಯಾಜ್ಯಗಳನ್ನು ಕೆಳಹಂತದ ಕೋರ್ಟ್ ನಲ್ಲೇ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದರು. ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನವಾದ ಕಾನೂನು ನೀಡಲಾಗಿದೆ. ದುರ್ಬಲರ ಮನೆ ಬಾಗಿಲಿಗೆ ನ್ಯಾಯಾಂಗದ ಸೌಲಭ್ಯ ತಲುಪಿಸಿದಾಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ. ಆ ದಿಸೆಯಲ್ಲಿ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು. ಹಿರಿಯರಾದ, ಅನುಭವಿಗಳಾದ ಎಚ್.ಕೆ.ಪಾಟೀಲ ಅವರು ಕಾನೂನು ಸಚಿವರಾಗಿದ್ದಾರೆ. ಅವರ ನೇತೃತ್ವದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಮನೆ ಬಾಗಿಲಿಗೆ ತಲುಪಿಸಲು, ಇರುವ ಸಮಸ್ಯೆಗಳನ್ನು ನಿವಾರಿಸಲು ಸರಕಾರ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು. ವಿಳಂಬ ನ್ಯಾಯದಾನ ನ್ಯಾಯವನ್ನು ನಿರಾಕರಿಸಿದಂತೆ ಎನ್ನುವ ಮಾತಿದೆ. ಹೆಚ್ಚು ಹೆಚ್ಚು ನ್ಯಾಯಾಲಯಗಳನ್ನು ತೆರೆಯುವ ಮೂಲಕ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸಲು ಅವಕಾಶವಾಗುತ್ತದೆ.
ಬುದ್ದಿವಂತರ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಸಿಕ್ಕಿದೆ. ನನ್ನ ಅದೃಷ್ಟ. ಈ ಜಿಲ್ಲೆಗೆ ನನ್ನಿಂದಾದ ಎಲ್ಲ ರೀತಿಯ ಸೇವೆ ಸಲ್ಲಿಸುವ ಪ್ರಯತ್ನ ಮಾಡುತ್ತೇನೆ. ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತೇನೆ. ಗಾಂಧಿ ಅವರ ಪರಿಕಲ್ಪನೆಯಂತೆ ಗ್ರಾಮ ರಾಜ್ಯ ಇರಬೇಕು ಎಂದು ಹೇಳಿದರು. ಬ್ರಹ್ಮಾವರದ ಸಂಚಾರಿ ಪೀಠವನ್ನು ಕಾಯಂ ಪೀಠವನ್ನಾಗಿ ಮಾಡುವುದಾಗಿ ಘೋಷಿಸಿದ ಕಾನೂನು,ಸಂಸದೀಯ ಸಚಿವರಾದ ಎಚ್.ಕೆ.ಪಾಟೀಲ್ ಅವರನ್ನು ಸಚಿವರು ಅಭಿನಂದಿಸಿದರು.
ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್ ಕುಮಾರ್, ಎಂ.ಐ.ಅರುಣ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.