ಬೆಳಗಾವಿ : ರಾಜ್ಯದ ಪ್ರಭಾವಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಮುಂದಿನ ವರ್ಷ ನಡೆಯಲಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯತ್ತ ತಮ್ಮ ಗಮನಹರಿಸಿದ್ದಾರೆ.
ಮುಂದಿನ ವರ್ಷ ಡಿಸಿಸಿ ಬ್ಯಾಂಕಿನ ಚುನಾವಣೆ ನಡೆಯಲಿದ್ದು ಆ ಕುರಿತು ನಾವು ಅಗತ್ಯ ಸಿದ್ಧತೆ ಮಾಡಿಕೊಂಡಿರುವುದಾಗಿ ಆಪ್ತ ವಲಯದಲ್ಲಿ ನುಡಿದಿರುವ ಹೆಬ್ಬಾಳ್ಕರ್ ಅವರ ಹೇಳಿಕೆ ಈಗ ಜಿಲ್ಲೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಒಂದೂವರೆ ದಶಕಗಳ ಹಿಂದೆ ಅವರು ರಾಜ್ಯ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗೆ ಚಿತ್ತಹರಿಸಿದ್ದರು. ಆನಂತರ ಅವರು ಬೆಳಗಾವಿ ಪಿ ಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಆಸಕ್ತಿ ವಹಿಸಿ ಆ ಚುನಾವಣೆಯನ್ನು ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡಿದ್ದರು. ಇದೀಗ ಅವರು ಮುಂದಿನ ವರ್ಷ ನಡೆಯಲಿರುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿರುವುದು ಈಗ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಹೊಸ ಅಲೆ ಬೀಸುವ ಛಾಯೆ ಸೃಷ್ಟಿಯಾಗಿದೆ. ಲಕ್ಷ್ಮಿ ಹೆಬ್ಬಾಳಕರ ಅವರು ಪಿಎಲ್ ಡಿ ಬ್ಯಾಂಕಿನ ಚುನಾವಣೆಯಲ್ಲಿ ಘಟಾನುಘಟಿಗಳನ್ನೇ ಎದುರು ಹಾಕಿಕೊಂಡಿದ್ದರು. ಅವರ ಪ್ರವೇಶದಿಂದ ಚುನಾವಣೆ ವ್ಯಾಪಕ ರಂಗು ಪಡೆದುಕೊಂಡಿತ್ತು. ಈಗ ಇಷ್ಟರಲ್ಲೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಂದಿನ ವರ್ಷದಲ್ಲಿ ನಡೆಯಲಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಈಗಲೇ ತೆರೆಯ ಮರೆಯಲ್ಲೇ ಅಗತ್ಯ ಸಿದ್ದ ಮಾಡಿಕೊಳ್ಳುತ್ತಿರುವುದು ಜಿಲ್ಲೆಯಲ್ಲಿ ಅವರ ಹಿಡಿತ ಮತ್ತಷ್ಟು ಪ್ರಬಲವಾಗುವ ಎಲ್ಲಾ ಸಾಧ್ಯತೆಗಳನ್ನು ಹುಟ್ಟು ಹಾಕುವಂತೆ ಮಾಡಿದ್ದು ಎದುರಾಳಿಗಳಿಗೆ ಈಗ ನಡುಕ ಹುಟ್ಟಿಸಲು ಕಾರಣವಾಗಿದೆ.