ಬೆಂಗಳೂರು : ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ಮುಂದಿನ 3 ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಅ.7ರಿಂದ ಅ.9ರವರೆಗೆ, ಬೆಂಗಳೂರು, ಬೆಂ.ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಬಳ್ಳಾರಿ, ದಾವಣಗೆರೆ, ಕೋಲಾರ, ತುಮಕೂರಿನಲ್ಲಿ ಅ.7 ಮತ್ತು ಅ.9ರಂದು ಗುಡುಗು, ಮಿಂಚು ಸಹಿತ ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮುಂದಿನ 3 ದಿನ ಸಾಧಾರಣ ಮಳೆಯಾಗಲಿದೆ. ಕೆಲ ಜಿಲ್ಲೆಗಳಲ್ಲಿ ಗಾಳಿ ವೇಗವೂ ಜಾಸ್ತಿ ಇರಲಿದೆ. ಹಿಂಗಾರು ಅವಧಿಯಲ್ಲಿ ಮಿಂಚು, ಗುಡುಗು ಜಾಸ್ತಿ ಇರಲಿದೆ. ಮಳೆ ಬಂದಾಗ ಜಮೀನಿನಲ್ಲಿ ಕೆಲಸ ಮಾಡಬಾರದು ಎಂದು ಇಲಾಖೆ ಸಲಹೆ ನೀಡಿದೆ.
ದಕ್ಷಿಣ ಕರ್ನಾಟಕದಲ್ಲಿ ವಾರ್ಷಿಕ 1,019 ಮಿ.ಮೀ. ಮಳೆಯಾಗುತ್ತದೆ. ಜೂನ್ನಿಂದ ಸೆಪ್ಟೆಂಬರ್ ವರೆಗಿನ ಮುಂಗಾರು ಅವಧಿಯಲ್ಲಿ 809 ಮಿ.ಮೀ. ಸುರಿದರೆ, ಹಿಂಗಾರಿನಲ್ಲಿ 210 ಮಿ.ಮೀ. ಬೀಳಲಿದೆ. ಅಕ್ಟೋಬರ್ನಿಂದ ಡಿಸೆಂಬರ್ ಅವಧಿವರೆಗೆ ಅಧಿಕ ಸೈಕ್ಲೋನ್ ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಹೆಚ್ಚು ಮಳೆ ಬರುವ ಸಾಧ್ಯತೆ ಇದೆ.
ಮೂರು ದಿನಗಳ ಕಾಲ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೇಘಸ್ಪೋಟ : ಬಮ್ಮಗುಂಡಿ ನದಿಯಲ್ಲಿ ರವಿವಾರ ಸುರಿದ ಮಳೆ ಜನರ ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಧ್ಯಾಹ್ನ ಸತತ ಮೂರು ಗಂಟೆಗಳ ಕಾಲ ಮಳೆ ಸುರಿದಿದೆ. ನದಿಯಲ್ಲಿ ಹಠಾತ್ತಾಗಿ ಕೆಸರು ಮಿಶ್ರಿತ ನೀರು ಏರಿಕೆಯಾಗಿದೆ. ಮಳೆ ನೀರು ಮನೆಗಳ ಅಂಗಳಕ್ಕೆ ನುಗ್ಗಿದ ಪರಿಣಾಮ ಪ್ರವಾಹದಿಂದ ಜನ ಆತಂಕಕ್ಕೆ ಸಿಲುಕಿದರು. ಕೆಲ ವಾಹನಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಲಾಡಿಯಲ್ಲಿ ಈ ಘಟನೆ ಕಂಡು ಬಂದಿದೆ. ಕಬ್ಬಿನಾಲೆಯ ಬಮ್ಮಗುಂಡಿ ನದಿಯಲ್ಲಿ ಹಠಾತ್ ಜಲ ಪ್ರವಾಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.