ಬೆಳಗಾವಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಜುಲೈ 23ರಿಂದ 26ರ ವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ , ಉಡುಪಿ, ದಕ್ಷಿಣ ಕನ್ನಡದ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಆದರೆ, ಕಳೆದ ಕೆಲವು ದಿನಗಳಿಂದ ಅತಿ ಭಾರೀ ಮಳೆಯ ರೆಡ್ ಅಲರ್ಟ್ ನೀಡುತ್ತ ಬಂದಿದ್ದ ಹವಾಮಾನ ಇಲಾಖೆ ಈಗ ಮಳೆಯ ಮಟ್ಟವನ್ನು ಈಗ ಯೆಲ್ಲೋ ಅಲರ್ಟ್ಗೆ ಇಳಿಕೆ ಮಾಡಿದೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಜುಲೈ 23ರಿಂದ 24 ರ ವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಜು.26ರ ವರೆಗೆ ಹಲವು ಕಡೆಗಳಲ್ಲಿ ಅಲ್ಪ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 20 ಸೆಂ.ಮೀ. ಮಳೆ
ಸೋಮವಾರ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ ನಲ್ಲಿ 20 ಸೆಂ.ಮೀ. ಮಳೆ ಸುರಿದಿದೆ. ಹೊನ್ನಾವರ ಹಾಗೂ ಆಗುಂಬೆಯಲ್ಲಿ ತಲಾ 11 ಸೆಂ.ಮೀ ಮಳೆ ಬಿದ್ದಿದೆ. ಸಿದ್ದಾಪುರ 10 ಸೆಂಮೀ , ಧರ್ಮಸ್ಥಳ, ಲಿಂಗನಮಕ್ಕಿ 8 ಸೆಂಮೀ, ಕುಮಟಾ, ಬೆಳಗಾವಿ ಜಿಲ್ಲೆ ಲೋಂಡಾದಲ್ಲಿ 7 ಸೆಂ.ಮೀ. ಮಳೆ ಸುರಿದಿದೆ.
ಪ್ರತಿವರ್ಷದಂತೆ ಈ ವರ್ಷವೂ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಹಾರಾಷ್ಟ್ರದ ನದಿ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಅಲ್ಲಿಂದ ಬೆಳಗಾವಿ ಜಿಲ್ಲೆಗೆ ಪ್ರವೇಶಿಸುವ ನದಿಕೊಳ್ಳಗಳು ಉಕ್ಕೇರಿ ಹರಿಯುತ್ತೇವೆ. ಒಟ್ಟಾರೆ ಬೆಳಗಾವಿ ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿರುವುದು ಈ ಸಲದ ಮಳೆಗಾಲದ ವಿಶೇಷತೆಯಾಗಿದೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳಿ ಹೊರವಲಯದ ದತ್ತ ಮಂದಿರ ಕೃಷ್ಣಾ ನದಿ ಪ್ರವಾಹದಲ್ಲಿ ಸುಮಾರು ಅರ್ಧ ಭಾಗದಷ್ಟು ಮುಳುಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ಹಾಗೂ ಅದರ ಉಪನದಿಗಳು ತುಂಬಿ ಹರಿಯುತ್ತಿವೆ. ಬೆಳಗಾವಿ ಹಾಗೂ ಖಾನಾಪುರ ತಾಲೂಕಿಗೆ ಸೋಮವಾರ ಮತ್ತು ಮಂಗಳವಾರ ರಜೆ ಸಾರಲಾಗಿದ್ದು ಮಂಗಳವಾರ ಬೆಳಗ್ಗೆ ಧಾರಾಕಾರ ಮಳೆ ಸುರಿಯುತ್ತಿದೆ. ಈ ಸಲದ ಮಳೆಗಾಲದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಸಾಕಷ್ಟು ಪರಿಣಾಮ ಬೀರಿ ಇರುವುದು ಗಮನ ಸೆಳೆದಿದೆ.