ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿ ಮುಂಗಾರು ಮಳೆ, ಮತ್ತೆ ಚುರುಕಾಗುವ ಸಾಧ್ಯತೆಯಿದ್ದು ಮತ್ತೆ ಆ ಭಾಗದ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಮುಂದಿನ 48 ಗಂಟೆಗಳಿಗೆ ಅನ್ವಯವಾಗುವಂತೆ ಆರೆಂಜ್ ಅಲರ್ಟ್ ನೀಡಲಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ, ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ಬೆಳಗಾವಿ, ಬಾಗಲಕೋಟೆ, ಹಾಸನ, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ನಿರಂತರ ಗಾಳಿಯ ವೇಗವು ಗಂಟೆಗೆ 30ರಿಂದ 40 ಕಿ.ಮೀ. ದಾಖಲಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ನಿರಂತರ ಗಾಳಿ ಬೀಸಲಿದೆ. ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.