ಬೆಂಗಳೂರು :
ಸಿಮೆಂಟ್ ದರವು ಅಕ್ಟೋಬರ್ 1ರಿಂದ ಮತ್ತೆ ಏರಿಕೆಯಾಗಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ದಕ್ಷಿಣ ವಲಯದಲ್ಲಿ ಚೀಲವೊಂದಕ್ಕೆ 30ರಿಂದ 40 ರೂ. ಏರಿಕೆಯಾಗಲಿದ್ದರೆ, ಉತ್ತರ ವಲಯದಲ್ಲಿ 10 ರಿಂದ 20 ರೂ. ಏರಿಕೆಯಾಗುವ ಸಂಭವವಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಕಳೆದ ಒಂದು ತಿಂಗಳಲ್ಲಿ ಸಿಮೆಂಟ್ ದರ ಶೇ. 12ರಿಂದ 13ರಷ್ಟು ಹೆಚ್ಚಾಗಿದೆ. ಭಾರತದಾದ್ಯಂತ ಸಿಮೆಂಟ್ನ ಸರಾಸರಿ ಬೆಲೆ ಪ್ರಸ್ತುತ ಪ್ರತಿ 50 ಕೆಜಿ ಚೀಲಕ್ಕೆ 382 ರೂ.ಗೆ ತಲುಪಿದೆ. ಈಶಾನ್ಯ ಭಾಗಗಳಲ್ಲಿ ಸಿಮೆಂಟ್ ಬೆಲೆ ಚೀಲಕ್ಕೆ 326ರಿಂದ 400 ರೂ. ಇದೆ.
ಮುಂಗಾರು ಹಂಗಾಮಿನಲ್ಲಿ ನಿರ್ಮಾಣ ಕಾರ್ಯಗಳು ಕಡಿಮೆಯಾಗುತ್ತವೆ. ಹೀಗಾಗಿ ಸಹಜವಾಗಿ ಸಿಮೆಂಟ್ಗೆ ಬೇಡಿಕೆ ಕಡಿಮೆಯಾಗುವುದರಿಂದ ಬೆಲೆಗಳು ಇಳಿಯಬೇಕಿತ್ತು. ಆದರೆ, ಈ ಬಾರಿ ಮುಂಗಾರು ಕೊರತೆಯಿಂದಾಗಿ ನಿರ್ಮಾಣ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇದ್ದು, ಸಿಮೆಂಟ್ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ಜನರು ಮನೆ ನಿರ್ಮಾಣಕ್ಕೆ ಮೊದಲು ಅಂದಾಜಿಸಿದ್ದಕ್ಕಿಂತ ಹೆಚ್ಚು ಹಣ ಖರ್ಚು ಮಾಡಬೇಕಿದೆ.
ಸಿಮೆಂಟ್ ಕಂಪನಿಗಳು ಏರುತ್ತಿರುವ ಸಿಮೆಂಟ್ ಬೆಲೆಯನ್ನು ಸಮರ್ಥವಾಗಿ ನಿರ್ವಹಿಸಿದರೆ ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಪ್ರತಿ ಟನ್ಗೆ ಗಳಿಸುತ್ತಿದ್ದ 800-900 ರೂ.ಗೆ ಹೋಲಿಸಿದರೆ 1200-1300 ರೂ. ಗಳಿಸುವ ಎಲ್ಲಾ ಸಾಧ್ಯತೆ ಇದೆ ಎಂದು ಕೆಲವು ತಜ್ಞರು ಹೇಳಿದ್ದಾರೆ.