ಹುಬ್ಬಳ್ಳಿ:
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ತನಿಖಾ ತಂಡಗಳು, ಕಳೆದ ಐದು ತಿಂಗಳಲ್ಲಿ ಬಸ್ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 13,956 ಪ್ರಯಾಣಿಕರನ್ನು ಪತ್ತೆ ಹಚ್ಚಿ, ₹13.24 ಲಕ್ಷ ದಂಡ ವಸೂಲಿ ಮಾಡಿದೆ.
ತನಿಖಾ ತಂಡಗಳು ಜನವರಿ– ಏಪ್ರಿಲ್ ತಿಂಗಳ ಅವಧಿಯಲ್ಲಿ 71,021 ತನಿಖೆಗಳನ್ನು ಮಾಡಿವೆ. ಟಿಕೆಟ್ ರಹಿತ ಪ್ರಯಾಣದಿಂದಾಗಿ ಸಂಸ್ಥೆಗೆ ₹1,41,391 ಆದಾಯ ಸೋರಿಕೆಯಾಗಿದ್ದು, ದಂಡದ ರೂಪದಲ್ಲಿ ₹13,24,245 ದಂಡ ವಸೂಲು ಮಾಡಲಾಗಿದೆ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಚ್. ರಾಮನಗೌಡರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆ ವ್ಯಾಪ್ತಿಯ ಧಾರವಾಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 55 ಡಿಪೊಗಳಿಂದ 4,445 ಬಸ್ಸುಗಳು ಸಂಚರಿಸುತ್ತಿವೆ. ನಿತ್ಯ ಸುಮಾರು 17 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಈ ಹಿನ್ನೆಯಲ್ಲಿ ಆದಾಯ ಸೋರಿಕೆ ತಡೆಯಲು ಕೇಂದ್ರ ಕಚೇರಿ ಹಾಗೂ ಆಯಾ ವಿಭಾಗಗಳ ಮಟ್ಟದಲ್ಲಿ ತನಿಖಾ ತಂಡಗಳ ಕಾರ್ಯ ಚಟುವಟಿಕೆಯನ್ನು ಚುರುಕುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಮೋಟಾರು ವಾಹನ ಕಾಯ್ದೆ ಪ್ರಕಾರ, ಸಾರಿಗೆ ಬಸ್ಗಳಲ್ಲಿ ಅಧಿಕೃತ ಟಿಕೆಟ್ ಪಡೆಯದೆ ಪ್ರಯಾಣ ಮಾಡುವುದು ಶಿಕ್ಷಾರ್ಹ ಅಪರಾಧ. ಅದಕ್ಕಾಗಿ ಪ್ರಯಾಣ ದರದ ಹತ್ತು ಪಟ್ಟು ಅಥವಾ ₹500 ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ತಪ್ಪದೆ ಟಿಕೆಟ್ ಪಡೆದು ಪ್ರಯಾಣ ಮಾಡಬೇಕು ಎಂದು ತಿಳಿಸಿದ್ದಾರೆ.