ಶ್ರೀನಗರ: ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರು ಶುಕ್ರವಾರ ಕಾಶ್ಮೀರಕ್ಕೆ ಭೇಟಿ ನೀಡಿದ ವೇಳೆ ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಮಾಡಿದ್ದನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಶೀಘ್ರದಲ್ಲೇ ಭಾರತಕ್ಕೆ ಸೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “370ನೇ ವಿಧಿ ರದ್ದತಿಯ ನಂತರ ಹೊಸ ಕಾಶ್ಮೀರ ನಿರ್ಮಾಣವಾಗಿದೆ. ಇಂದು ಕಾಶ್ಮೀರ ಬದಲಾಗುತ್ತಿದೆ ಮತ್ತು ಸಮೃದ್ಧಿಯತ್ತ ಸಾಗುತ್ತಿದೆ. ಹಿಂದೆ ಯುವಕರು ಕಲ್ಲು ತೂರಾಟ ನಡೆಸುತ್ತಿದ್ದ ಜಾಗದಲ್ಲಿ ಇಂದು ಅವರ ಕೈಯಲ್ಲಿ ಪೆನ್ನುಗಳಿವೆ, ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ,” ಎಂದು ಸಂತಸ ವ್ಯಕ್ತಪಡಿಸಿದರು.
ಪಿಒಕೆ ಭಾರತದ ಅವಿಭಾಜ್ಯ ಅಂಗ:
ಪಹಲ್ಗಾಮ್ ದಾಳಿಯ ನಂತರ ಪ್ರವಾಸೋದ್ಯಮದ ಮೇಲಾದ ಪರಿಣಾಮದ ಬಗ್ಗೆ ಮಾತನಾಡಿದ ಅವರು, “ಕಾಶ್ಮೀರ ಈಗ ಸುರಕ್ಷಿತವಾಗಿದೆ. ಇಲ್ಲಿ ಯಾವುದೇ ಭಯದ ವಾತಾವರಣವಿಲ್ಲ. ದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡಬೇಕು,” ಎಂದು ಮನವಿ ಮಾಡಿದರು.
ಹಜರತ್ಬಾಲ್ ದರ್ಗಾಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, “ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದು ಖಂಡಿತವಾಗಿಯೂ ಭಾರತಕ್ಕೆ ಮರಳಲಿದೆ. ಕಾಶ್ಮೀರದ ಅಭಿವೃದ್ಧಿಯನ್ನು ನೋಡುತ್ತಿರುವ ಅಲ್ಲಿನ ಜನರು ಭಾರತಕ್ಕೆ ಮರಳಲು ಬಯಸುತ್ತಿದ್ದಾರೆ. ಪಿಒಕೆ ಶೀಘ್ರದಲ್ಲೇ ನಮ್ಮದಾಗಲಿದೆ,” ಎಂದರು.
ಜಮ್ಮು ಮತ್ತು ಕಾಶ್ಮೀರ ವಕ್ಫ್ ಮಂಡಳಿಯ ಅಧ್ಯಕ್ಷೆ ಹಾಗೂ ಬಿಜೆಪಿ ನಾಯಕಿ ಡಾ. ದರಕ್ಷನ್ ಅಂದ್ರಾಬಿ ಅವರ ಕೆಲಸವನ್ನು ಇಲ್ಯಾಸಿ ಕೊಂಡಾಡಿದರು. “ಅವರ ಕಾರ್ಯವೈಖರಿ ನಮಗೆ ಮಾದರಿಯಾಗಿದೆ. ಜಮ್ಮು-ಕಾಶ್ಮೀರ ವಕ್ಫ್ ಮಂಡಳಿಯನ್ನು ಅವರು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ,” ಎಂದು ಶ್ಲಾಘಿಸಿದರು.


