ನವದೆಹಲಿ:
ದೇಶದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ‘ಎಚ್ಡಿಎಫ್ಸಿ ಬ್ಯಾಂಕ್’ ಜೊತೆ ಗೃಹ ಸಾಲ ವಲಯದ ದೈತ್ಯ ಹಣಕಾಸು ಸಂಸ್ಥೆಯಾಗಿದ್ದ ‘ಎಚ್ಡಿಎಫ್ಸಿ’ (HDFC Ltd) ವಿಲೀನವಾಗಿವೆ.ಜುಲೈ 1ರಿಂದ ವಿಲೀನ ಜಾರಿಗೆ ಬರಲಿದೆ.
ಇಂಡಿಯಾ ಇಂಕ್ನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ವಿಲೀನವಾಗಿದೆ ಎನ್ನಲಾಗುತ್ತಿದೆ. ಎಚ್ಡಿಎಫ್ಸಿ ಲಿಮಿಟೆಡ್ನ ಉದ್ಯೋಗಿಗಳು ಇನ್ಮುಂದೆ ಎಚ್ಡಿಎಫ್ಸಿ ಬ್ಯಾಂಕ್ ಉದ್ಯೋಗಿಗಳಾಗಲಿದ್ದಾರೆ.
1977 ರಲ್ಲಿ ಸ್ಥಾಪನೆಯಾಗಿದ್ದ ಎಚ್ಡಿಎಫ್ಸಿ ಲಿಮಿಟೆಡ್ (Housing Development Finance Corporation Ltd) ಸಂಸ್ಥೆ ಭಾರತದ ಗೃಹ ಸಾಲ ವಲಯದ ಮೊದಲ ಹಣಕಾಸು ಸಂಸ್ಥೆಯಾಗಿತ್ತು. ಹಾಗೂ ಇದು 1994 ರಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಅನ್ನು ಸ್ಥಾಪನೆ ಮಾಡಿತ್ತು.
ಎಚ್ಡಿಎಫ್ಸಿ ಬ್ಯಾಂಕ್ ತನ್ನ ಮಾತೃ ಕಂಪನಿಯನ್ನೇ ತನ್ನ ಜೊತೆಗೆ ವಿಲೀನ ಮಾಡಿಕೊಂಡಿರುವುದು ವಿಶೇಷವಾಗಿದೆ. ಈ ಮೂಲಕ ಎಚ್ಡಿಎಫ್ಸಿ ಬ್ಯಾಂಕ್ ಜಗತ್ತಿನ ನಾಲ್ಕನೇ ಅತಿದೊಡ್ಡ ಹಣಕಾಸು ಸಂಸ್ಥೆ ಎಂಬ ಹೆಗ್ಗಳಿಕೆ ಪಡೆಯುವಂತಾಗಿದೆ. ಈ ವಿಲೀನದೊಂದಿಗೆ ಎಚ್ಡಿಎಫ್ಸಿ ಮಾರುಕಟ್ಟೆ ಬಂಡವಾಳ ಮೌಲ್ಯ ₹18 ಲಕ್ಷ ಕೋಟಿಗೂ ಅಧಿಕವಾಗಿದೆ.
ಈ ಮೂಲಕ ಎರಡೂ ಸಂಸ್ಥೆಗಳ ನಡುವೆ ಇದ್ದ ವ್ಯವಹಾರ ಅಡೆತಡೆಗಳನ್ನು ಇದು ನಿವಾರಿಸುತ್ತದೆ, ಷೇರುದಾರರ ಹಾಗೂ ಉದ್ಯೋಗಿಗಳ, ಗ್ರಾಹಕರ ಸುಗಮ ವ್ಯವಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಹೊಸ HDFC ಬ್ಯಾಂಕ್ ಘಟಕವು ಸುಮಾರು 12 ಕೋಟಿ ಗ್ರಾಹಕರನ್ನು ಹೊಂದಿರುತ್ತದೆ – ಅದು ಜರ್ಮನಿಯ ಜನಸಂಖ್ಯೆಗಿಂತ ಹೆಚ್ಚು. ಇದು ತನ್ನ ಶಾಖೆಯ ನೆಟ್ವರ್ಕ್ ಅನ್ನು 8,300ಕ್ಕೆ ಹೆಚ್ಚಿಸಲಿದೆ ಮತ್ತು ಒಟ್ಟು 1,77,000 ಉದ್ಯೋಗಿಗಳನ್ನು ಹೊಂದಲಿದೆ.
ಎಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್ ಮತ್ತು ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ನ ಒಪ್ಪಂದವು ಜೆಪಿ ಮೋರ್ಗಾನ್ ಚೇಸ್ & ಕಂ, ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೈನಾ ಲಿಮಿಟೆಡ್ ಮತ್ತು ಬ್ಯಾಂಕ್ ಆಫ್ ಅಮೇರಿಕಾ ಕಾರ್ಪೊರೇಷನ್ನ ನಂತರ ಈಕ್ವಿಟಿ ಮಾರುಕಟ್ಟೆ ಬಂಡವಾಳೀಕರಣದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಈ ಎರಡು ಸಂಸ್ಥೆಗಳ ವಿಲೀನದ ಪ್ರಕ್ರಿಯೆಗೆ ಏಪ್ರಿಲ್ 2022 ರಲ್ಲಿ ಚಾಲನೆ ನೀಡಲಾಗಿತ್ತು. ಉಳಿದಂತೆ ಎಚ್ಡಿಎಫ್ಸಿ ಅಂಗ ಸಂಸ್ಥೆಗಳಾದ ಎಚ್ಡಿಎಫ್ಸಿ ಸೆಕ್ಯೂರಿಟೀಸ್, ಎಚ್ಡಿಎಫ್ಸಿ ಎರ್ಗೊ ಇನ್ಶುರೆನ್ಸ್, ಎಚ್ಡಿಎಫ್ಸಿ ಫಿನಾನ್ಸಿಯಲ್ ಸರ್ವಿಸಸ್, ಎಚ್ಡಿಎಫ್ಸಿ ಜನರಲ್ ಇನ್ಶುರೆನ್ಸ್ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿವೆ.