ಹೋಸ್ಟನ್: ಅಮೆರಿಕದ ರಾಜಕಾರಣಿಯೊಬ್ಬರು ‘ಅಮೆರಿಕ ಕ್ರೈಸ್ತರ ದೇಶ’ ಎಂದು ಪ್ರತಿಪಾದಿಸಿ, ಹಿಂದೂಗಳು ನಂಬುವ ಹನುಮಂತನನ್ನು ‘ಸುಳ್ಳು ದೇವರು’ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. ಅವರ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.
ಡೊನಾಲ್ಡ್ ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷವು ಭಾರತ ಮತ್ತು ಹಿಂದೂ ದೇವರುಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವಲ್ಲಿ ಎಲ್ಲಾ ಮಿತಿಗಳನ್ನು ಮೀರುತ್ತಿದೆ. ಅಮೆರಿಕದ ಟೆಕ್ಸಾಸ್ ರಾಜ್ಯದ ರಿಪಬ್ಲಿಕನ್ ನಾಯಕ ಅಲೆಕ್ಸಾಂಡರ್ ಡಂಕನ್ ಟೆಕ್ಸಾಸ್ನಲ್ಲಿ ನಿರ್ಮಿಸಲಾಗುತ್ತಿರುವ ಹನುಮಂತನ ದೈತ್ಯ ಪ್ರತಿಮೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ” ಅಮೆರಿಕ ಕ್ರಿಶ್ಚಿಯನ್ ರಾಷ್ಟ್ರವಾಗಿದ್ದು, ಇಲ್ಲಿ ನಕಲಿ ಹಿಂದೂ ದೇವರ ಪ್ರತಿಮೆ ಇರುವುದು ಸರಿಯಲ್ಲ” ಎಂದು ಅಲೆಕ್ಸಾಂಡರ್ ಡಂಕನ್ ಹಿಂದೂ ದೇವರ ಪ್ರತಿಮೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಟೆಕ್ಸಾಸ್ ನಲ್ಲಿ ಸುಳ್ಳು ಹಿಂದೂ ದೇವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ನಾವೇಕೆ ಅನುಮತಿ ನೀಡಿದ್ದೇವೆ? ಎಂದು ಪ್ರಶ್ನಿಸಿದ್ದಾರೆ. ಅವರ ಹೇಳಿಕೆ ಅಮೆರಿಕದ ಹಿಂದೂಗಳನ್ನು ಕೆರಳಿಸಿದೆ.