ಬೆಂಗಳೂರು : ಭಾರತೀಯ ಉಪಖಂಡದಲ್ಲಿ ಅಲ್-ಖೈದಾ (AQIS) ಜೊತೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಘಟಕದ ಹಿಂದಿನ ಪ್ರಮುಖ ಸಂಚುಕೋರಳನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ. ಆರೋಪಿಯನ್ನು 30 ವರ್ಷದ ಶಮಾ ಪರ್ವೀನ್ ಎಂದು ಗುರುತಿಸಲಾಗಿದ್ದು, ಆಕೆಯನ್ನು ಮಂಗಳವಾರ ಕರ್ನಾಟಕದ ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ವರದಿಗಳ ಪ್ರಕಾರ, ಪರ್ವೀನ್ ಇಡೀ ಘಟಕವನ್ನು ನಡೆಸುತ್ತಿದ್ದಳು ಮತ್ತು ಕರ್ನಾಟಕದಿಂದ ಕಾರ್ಯಾಚರಣೆಗಳನ್ನು ಸಂಘಟಿಸುವ ಪ್ರಮುಖ ನಿರ್ವಾಹಕಳಾಗಿದ್ದಳು. ಕಳೆದ ವಾರ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದ ನಾಲ್ವರು ಅಲ್-ಖೈದಾ ಭಯೋತ್ಪಾದಕರಿಂದ ಪಡೆದ ಸುಳಿವುಗಳ ಆಧಾರದ ಮೇಲೆ ಈಕೆಯ ಬಂಧನ ಮಾಡಲಾಗಿದೆ.ಈಕೆ ಜಾರ್ಖಂಡ್ ಮೂಲದವಳಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹೋಧರನ ಮನೆಯಲ್ಲಿ ಮೂರು ವರ್ಷಗಳಿಂದ ನೆಲೆಸಿದ್ದಳು ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ಬಂಧಿಸಲಾದ ಮಹಿಳೆ ಹೆಚ್ಚು ಮೂಲಭೂತವಾದಿ ಮತ್ತು ಆನ್ಲೈನ್ ಭಯೋತ್ಪಾದನಾ ಘಟಕವನ್ನು ನಡೆಸುತ್ತಿದ್ದಳು ಎಂದು ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಹೇಳಿದ್ದಾರೆ. ಆಕೆಯ ಪಾಕಿಸ್ತಾನಿ ಸಂಪರ್ಕಗಳು ಸಹ ಕಂಡುಬಂದಿವೆ ಎಂದು ಅವರು ದೃಢಪಡಿಸಿದ್ದಾರೆ.”ಗುಜರಾತ್ ಎಟಿಎಸ್ ಈ ಹಿಂದೆ 4 ಎಕ್ಯೂಐಎಸ್ (ಭಾರತ ಉಪಖಂಡದಲ್ಲಿ ಅಲ್-ಖೈದಾ) ಭಯೋತ್ಪಾದಕರನ್ನು ಬಂಧಿಸಿತ್ತು… ನಿನ್ನೆ ಬೆಂಗಳೂರಿನ ಮಹಿಳೆಯೊಬ್ಬರನ್ನು ಬಂಧಿಸಲಾಗಿತ್ತು. ಬಂಧಿತ ಮಹಿಳೆ ಆನ್ಲೈನ್ ಭಯೋತ್ಪಾದನಾ ಮಾಡ್ಯೂಲ್ ನಡೆಸುತ್ತಿದ್ದಳು. ಅವರ ಎಲೆಕ್ಟ್ರಾನಿಕ್ ಸಾಧನಗಳಿಂದ ಪಾಕಿಸ್ತಾನದ ಪ್ರಮುಖ ಸಂಪರ್ಕಗಳನ್ನು ಕಂಡುಕೊಳ್ಳಲಾಗಿದೆ. ಒಟ್ಟಾರೆಯಾಗಿ, ಗುಜರಾತ್ ಎಟಿಎಸ್ ಆನ್ಲೈನ್ ಭಯೋತ್ಪಾದನಾ ಮಾಡ್ಯೂಲ್ ನಡೆಸುತ್ತಿದ್ದ 5 ಎಕ್ಯೂಐಎಸ್ ಭಯೋತ್ಪಾದಕರನ್ನು ಬಂಧಿಸಿದೆ…” ಎಂದು ತಿಳಿಸಿದ್ದಾರೆ.
ಜುಲೈ 23 ರಂದು ಗುಜರಾತ್ ಎಟಿಎಸ್ ಭಾರತೀಯ ಉಪಖಂಡದಲ್ಲಿ ಅಲ್-ಖೈದಾ (ಎಕ್ಯೂಐಎಸ್) ನ ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಿ, ಭಯೋತ್ಪಾದಕ ಗುಂಪಿನ ನಾಲ್ವರು ಭಯೋತ್ಪಾದಕರನ್ನು ಬಂಧಿಸಿತ್ತು. ಭಯೋತ್ಪಾದಕರಲ್ಲಿ ಒಬ್ಬನನ್ನು ದೆಹಲಿಯಿಂದ, ಒಬ್ಬನನ್ನು ನೋಯ್ಡಾದಿಂದ ಮತ್ತು ಇಬ್ಬರನ್ನು ಗುಜರಾತ್ನ ಅಹಮದಾಬಾದ್ ಮತ್ತು ಮೋಡಸಾದಿಂದ ಬಂಧಿಸಲಾಯಿತು.
ನಾಲ್ವರು ಭಯೋತ್ಪಾದಕರನ್ನು ಮೊಹಮ್ಮದ್ ಫೈಕ್, ಮೊಹಮ್ಮದ್ ಫರ್ದೀನ್, ಸೆಫುಲ್ಲಾ ಖುರೇಷಿ ಮತ್ತು ಜೀಶನ್ ಅಲಿ ಎಂದು ಗುರುತಿಸಲಾಗಿದೆ.
ನಾಲ್ವರು ಭಯೋತ್ಪಾದಕರು 20-25 ವರ್ಷ ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ, ಅವರು ದೇಶದಲ್ಲಿ ದೊಡ್ಡ ದಾಳಿ ನಡೆಸಲು ಯೋಜಿಸುತ್ತಿದ್ದರು. ನಾಲ್ವರು ಭಯೋತ್ಪಾದಕರು ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದರು ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.