ಬೆಳಗಾವಿ :
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ ಯಾತ್ರೆ ಆರಂಭವಾಗಲಿದೆ.
ಈ ಸಂಬಂಧ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳಿಗೆ ನೀಡಿದ ವಿವರ ಇಂತಿದೆ.
ಇದೇ ತಿಂಗಳು 30 ರಂದು ಯಾತ್ರೆ ಶುರುವಾಗಲಿದೆ. ಅಂದು ವಿಜಯಪುರದಲ್ಲಿ ಕೃಷ್ಣಾ ನೀರು ಹಂಚಿಕೆ ವಿಚಾರವಾಗಿ, ಮುಂದಿನ ತಿಂಗಳು 2 ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ಯೋಜನೆ ವಿಚಾರವಾಗಿ ಹೋರಾಟ ಹಮ್ಮಿಕೊಂಡಿದ್ದೇವೆ. ಜ. 8 ರಂದು ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮಾವೇಶವನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದೇವೆ.
ಬೆಳಗಾವಿಯಿಂದ ನಮ್ಮ ನಾಯಕರೆಲ್ಲರೂ ಸೇರಿ ಬಸ್ ಯಾತ್ರೆ ಆರಂಭಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಗಾಂಧೀಜಿ ಅವರು ಇಲ್ಲಿ ಎಐಸಿಸಿ ಸಭೆ ಮಾಡಿದ್ದರು. ಈ ಜಾಗದಲ್ಲಿ ಒಂದು ಇತಿಹಾಸವಿದೆ. ರಾಜ್ಯದಲ್ಲಿ ಜನಪರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಬೆಳಗಾವಿಗೆ ಜ.10 ರಂದು ಆಗಮಿಸಿ 11 ರಿಂದ ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಸಭೆ ಮಾಡಲಿದ್ದೇವೆ. ಜಿಲ್ಲೆ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಮಾಡುತ್ತಿದ್ದೇವೆ.
ನಂತರ ನಾಲ್ಕು ದಿನ ವಿರಾಮವಿರಲಿದ್ದು, ಜ.16 ರಂದು ಹೊಸಪೇಟೆಗೆ ತೆರಳುತ್ತೇವೆ.
ಜ. 17 ರಂದು ಹೊಸಪೇಟೆ ಹಾಗೂ ಕೊಪ್ಪಳ
18 ರಂದು ಬಾಗಲಕೋಟೆ ಮತ್ತು ಗದಗ
19ರಂದು ಹಾವೇರಿ ಮತ್ತು ದಾವಣಗೆರೆಯಲ್ಲಿ ಯಾತ್ರೆ ನಡೆಯಲಿದೆ.
20 ರಂದು ವಿರಾಮ ದಿನ. 21ರಂದು ಹಾಸನ ಮತ್ತು ಚಿಕ್ಕಮಗಳೂರು, 22ರಂದು ಉಡುಪಿ ಮತ್ತು ದಕ್ಷಿಣ ಕನ್ನಡ, 23ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಪ್ರವಾಸ ನಡೆಯಲಿದೆ.
24 ರಂದು ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ನಡೆಯಲಿದೆ. 25 ವಿರಾಮದ ದಿನ. 26 ರಂದು ಮೈಸೂರು ಹಾಗೂ ಚಾಮರಾಜನಗರ, 27 ರಂದು ಮಂಡ್ಯ ಹಾಗೂ ರಾಮನಗರ, 28 ರಂದು ಯಾದಗಿರಿ ಹಾಗೂ ಬೀದರ್ ನಲ್ಲಿ ನಡೆಯಲಿದೆ.
ಉಳಿದಂತೆ ಉತ್ತರ ಕನ್ನಡ, ರಾಯಚೂರು, ಕೊಡಗು ಹಾಗೂ ಬಳ್ಳಾರಿ ಭಾಗದ ಪ್ರವಾಸದ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ನೀಡುತ್ತೇವೆ.
ಮುಂದಿನ ತಿಂಗಳು ಪೂರ್ತಿ ಯಾತ್ರೆ ನಡೆಯಲಿದೆ. ನಂತರ ಒಂದು ತಿಂಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಎಲ್ಲಾ ಬೂತ್ ಮಟ್ಟದಲ್ಲಿ ಎಲ್ಲಾ ನಾಯಕರು ಒಳಗೊಂಡಂತೆ ಒಂದು ಸಭೆ ನಡೆಸಲಿದ್ದಾರೆ. ಪ್ರತಿ ಬೂತ್ ನಲ್ಲಿ ಪಕ್ಷದ ಧ್ವಜ ಹಾರಿಸಿ ರಾಜ್ಯದಲ್ಲಿನ ದುರಾಡಳಿತ, ಕೇಂದ್ರದ ಅನ್ಯಾಯ ಬಗ್ಗೆ ಸಭೆ ಮಾಡಬೇಕು.
ಇದಕ್ಕೆ ಪಕ್ಷದ ಪದಾಧಿಕಾರಿಗಳು ವ್ಯವಸ್ಥೆ ಮಾಡುತ್ತಾರೆ. ನಂತರ ಜಿಲ್ಲಾ ಮಟ್ಟದ ಸಭೆ ನಡೆಯಲಿದ್ದು ಇದಕ್ಕೆ ನಮ್ಮ ರಾಜ್ಯ ಮಟ್ಟದ ನಾಯಕರು ತೆರಳಲಿದ್ದಾರೆ. ಇದು ಎಐಸಿಸಿ ಕಾರ್ಯಕ್ರಮವಾಗಿದ್ದು, ಕೈಗೆ ಕೈ ಜೋಡಿಸಿ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಮಾಡುತ್ತೇವೆ.
ಈ ಯಾತ್ರೆ ಸಂದರ್ಭದಲ್ಲಿ ಟಿಕೆಟ್ ಘೋಷಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ‘ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ನಾಯಕರು ಸಭೆ ಮಾಡಿ ಎಲ್ಲಾ ಘಟಕಗಳ ಜತೆ ಚರ್ಚಿಸಲಿದ್ದಾರೆ. ಯಾರೆಲ್ಲಾ ಅರ್ಜಿ ಹಾಕಿದ್ದಾರೆ ಅದನ್ನು ಜಿಲ್ಲಾ ಕಾಂಗ್ರೆಸ್ ಗೆ ಕಳುಹಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಸಮನ್ವಯದಲ್ಲಿ ಕಾಯ್ದುಕೊಂಡು 2-3 ಹೆಸರು ಸೂಚಿಸಲಿದ್ದಾರೆ ‘ ಎಂದರು.
ಯಾತ್ರೆಯಲ್ಲಿ ಎಷ್ಟು ಜಿಲ್ಲೆ ಕ್ರಮಿಸುತ್ತೀರಿ ಎಂಬ ಪ್ರಶ್ನೆಗೆ, ‘ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯಾತ್ರೆ ಮಾಡುತ್ತೇವೆ. ಕೆಲ ಜಿಲ್ಲೆಗಳ ದಿನಾಂಕಗಳನ್ನಷ್ಟೆ ಪ್ರಕಟಿಸಿಲ್ಲ. ಈ ಯಾತ್ರೆ ನಂತರ 2 ತಂಡ ಮಾಡಿಕೊಂಡು, 224 ಕ್ಷೇತ್ರಗಳಿಗೆ ಪ್ರವಾಸ ಮಾಡುತ್ತೇವೆ. ನಾನು ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಹಾಗೂ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ನಂತರ ಕರಾವಳಿ ಹಾಗೂ ಬೆಂಗಳೂರು ಭಾಗದಲ್ಲಿ ನಾನು ಸಿದ್ದರಾಮಯ್ಯ ಇಬ್ಬರೂ ಒಟ್ಟಿಗೆ ಪ್ರವಾಸ ಮಾಡುತ್ತೇವೆ ‘ ಎಂದು ತಿಳಿಸಿದರು.