ಬೆಂಗಳೂರು:
ಕಾಂಗ್ರೆಸ್ನ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ, ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’ ಯೋಜನೆ ಜುಲೈ 1 ರಿಂದ ಜಾರಿಗೆ ಬರಲಿದೆ.
ಮಾಸಿಕ 200 ಯೂನಿಟ್ ಒಳಗೆ ವಿದ್ಯುತ್ ಬಳಸುವ ಮತ್ತು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅರ್ಹವಾಗುವ ಮನೆಗಳಿಗೆ ಈ ಯೋಜನೆ ಅನ್ವಯವಾಗಲಿದೆ.
ಕಳೆದ ಒಂದು ವರ್ಷದ ಸರಾಸರಿಯಂತೆ ಮಾಸಿಕ ಇಂತಿಷ್ಟು ಎಂದು ಯೂನಿಟ್ ವಿದ್ಯುತ್ ಉಚಿತವಾಗಲಿದೆ.
ಈಗಾಗಲೇ ಜೂನ್ನಲ್ಲಿ ಬಳಸಿರುವ ವಿದ್ಯುತ್ನ ಬಿಲ್ ಜುಲೈನಲ್ಲಿ ಬರಲಿದ್ದು, ಆ ಬಿಲ್ ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ.
ಆ ಬಳಿಕ ಆಗಸ್ಟ್ನಲ್ಲಿ ವಾರ್ಷಿಕ ಸರಾಸರಿಯಂತೆ ಆಯಾ ಮನೆಗೆಗಳಿಗೆ ನಿಗದಿ ಪಡಿಸಿರುವ ಪ್ರಮಾಣದ ವಿದ್ಯುತ್ ಉಚಿತವಿರಲಿದೆ.
ಒಂದು ವೇಳೆ ಹೆಚ್ಚು ಬಳಸಿದರೆ ಹೆಚ್ಚುವರಿ ಬಳಕೆಯ ಶುಲ್ಕ ಪಾವತಿಸಬೇಕಾಗುತ್ತದೆ. ಕಳೆದ 12 ತಿಂಗಳಿನಲ್ಲಿ ಬಳಕೆ ಮಾಡಿದ ವಿದ್ಯುತ್ ಸರಾಸರಿ ಆಧಾರದ ಮೇಲೆ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಉದಾಹಣರೆಗೆ : ಕಳೆದ 12 ತಿಂಗಳಿನಲ್ಲಿ 100 ಯುನಿಟ್ ವಿದ್ಯುತ್ ಬಳಸಿದ್ದರೆ, ಈಗ 110 ಯುನಿಟ್ವರೆಗೆ ಮಾತ್ರ ಉಚಿತ ವಿದ್ಯುತ್ ಬಳಸಲು ಅವಕಾಶ ಇರುತ್ತದೆ. ಉಚಿತ ವಿದ್ಯುತ್ ಪಡೆಯಬೇಕಾದರೆ ಬಾಕಿ ಇರುವ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ಸರ್ಕಾರ ಸೆಪ್ಟೆಂಬರ್ ವರೆಗೆ ಇದಕ್ಕೆ ಸಮಯ ನೀಡಿದ್ದು, ಉಚಿತ್ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಿದವರು ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಪಾವತಿ ಮಾಡಬೇಕು.
ಒಂದು ತಿಂಗಳಿಗೆ 200 ಯುನಿಟ್ಗಿಂತ ಹೆಚ್ಚು ಅಥವಾ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವಿದ್ಯುತ್ ಬಳಸಿದರೆ ಆ ತಿಂಗಳ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ಮತ್ತು ಮುಂದಿನ ತಿಂಗಳಿನಿಂದ ಸರಾಸರಿಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿದರೆ ಉಚಿತ ವಿದ್ಯುತ್ ಸಿಗಲಿದೆ.
ಈ ವಿಚಾರದಲ್ಲಿ ಇನ್ನೂ ಗೊಂದಲಗಳಿದ್ದು ವಿದ್ಯುತ್ ಇಲಾಖೆ ಯೋಜನೆಯನ್ನು ಹೇಗೆ ಜಾರಿಗೊಳಿಸಲಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಪಷ್ಟವಾಗಲಿದೆ.
ಕಳೆದ ಎರಡು ವಾರದಿಂದ ಗೃಹ ಜ್ಯೋತಿಗೆ ನೋಂದಾವಣೆ ನಡೆಯುತ್ತಿದ್ದು ಶುಕ್ರವಾರದ ವರೆಗೆ ರಾಜ್ಯಾದ್ಯಂತ 86,24,688 ಅರ್ಜಿ ಸಲ್ಲಿಕೆಯಾಗಿವೆ.