ಬೆಳಗಾವಿ : ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳ ಭರಾಟೆ ಮೇರೆ ಮೀರಿದೆ. ಅದಕ್ಕೆ ತಕ್ಕಂತೆ ಮಾನವರು ದಿನೇ ದಿನೇ ಹೊಸ ಹೊಸ ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದಾರೆ. ತಂತ್ರಜ್ಞಾನಗಳ ಬೆಳವಣಿಗೆಯಾಗುತ್ತಿದ್ದಂತೆ ಅದಕ್ಕೆ ತಕ್ಕಂತೆ ಪರಿವರ್ತನೆಗಳು ಆಗುವುದು ಸಹಜ. ಆದರೆ, ಅದೇ ದುರುಪಯೋಗಕ್ಕೆ ದಾರಿ ಮಾಡಿಕೊಡಬಾರದು. ವಿಪರ್ಯಾಸವೆಂದರೆ ಬೆಳಗಾವಿಯ ಸರ್ಕಾರಿ ಕಚೇರಿಗಳಲ್ಲಿ ಇದೀಗ ಸರಕಾರಿ ಯಂತ್ರಗಳ ದುರುಪಯೋಗವಾಗುತ್ತಿರುವುದು ಮಾತ್ರ ಅಸಹ್ಯ ಹುಟ್ಟಿಸುವಂತಿದೆ.
ಬೆಳಗಾವಿ ನೀರಾವರಿ ಕಚೇರಿಯ ಎದುರಿನಲ್ಲಿ ಇರುವ ನೀರಿನ ಹಣ ತುಂಬುವ ಸರಕಾರಿ ಕಚೇರಿ ಈಗ ಮೊಬೈಲ್ ಚಾರ್ಜಿಂಗ್ ಕೇಂದ್ರವು ಎಂಬಂತೆ ಭಾಸವಾಗುತ್ತಿದೆ. ಯಾಕೆಂದರೆ ಇಲ್ಲಿಯ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಹುತೇಕರು ಎಲೆಕ್ಟ್ರಿಕ್ ವಾಹನ ಉಪಯೋಗಿಸುತ್ತಿದ್ದಾರೆ. ಅದರ ಪರಿಣಾಮ ಇದೀಗ ಕಚೇರಿಯ ಹೊರಗಡೆ ತಮ್ಮ ವಾಹನಕ್ಕೆ ಚಾರ್ಜಿಂಗ್ ಮಾಡಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರುವುದು ಕಣ್ಣಿಗೆ ರಾಚುತ್ತಿದೆ.
ಕರ್ನಾಟಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ಎದುರು ಈ ಘಟನೆ ಮಂಗಳವಾರದಂದು ಗಮನಸೆಳೆಯಿತು.
ನಾಡಿನ ಇಂಧನ ಸಚಿವರೇ ಇನ್ನಾದರೂ ಇತ್ತ ಗಮನ ಹರಿಸಿರಿ. ಒಂದೆಡೆ ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂಬ ಆರೋಪವಿದೆ. ಲೋಕಸಭಾ ಚುನಾವಣೆ ಇರುವ ಕಾರಣ ಆಗಾಗ ವಿದ್ಯುತ್ ನೀಡಿ ತುಪ್ಪ ಸವರಲಾಗಿದೆ. ಆದರೆ, ಚುನಾವಣೆ ಮುಗಿದ ಬೆನ್ನಲ್ಲೇ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಆದರೆ ಅದೇ ಸರಕಾರಿ ಇಲಾಖೆಯ ಅಧಿಕಾರಿಗಳು ರಾಜಾರೋಷವಾಗಿ ವಿದ್ಯುತ್ ಕಳ್ಳತನ ಮಾಡುತ್ತಿರುವುದು ಮಾತ್ರ ಖಂಡನೀಯ ಎನ್ನುವುದು ಜನರ ಅಭಿಪ್ರಾಯವಾಗಿದೆ.