- CPEd ಗ್ರೌಂಡ್ ಗಾಗಿ ಪುಂಡರಿಂದ ಗೂಂಡಾಗಿರಿ..!
- ಕಾಲೇಜ್ ಪ್ರಿನ್ಸಿಪಾಲ್ ಮೇಲೆ ಹಲ್ಲೆ; ಪ್ರಾಣ ಬೆದರಿಕೆ..!
- ಹಗಲು ರಾತ್ರಿ ಕಾಯಿಸಿ ಪ್ರಕರಣ ದಾಖಲಿಸಿಕೊಂಡ ಕ್ಯಾಂಪ್ ಪೊಲೀಸರು.
ಬೆಳಗಾವಿ : ನಗರದ ಕ್ಲಬ್ ರಸ್ತೆಯಲ್ಲಿರುವ ಮೆಥೋಡಿಸ್ಟ್ ಸಂಸ್ಥೆಯ ಬೆನನ್ ಸ್ಮಿತ್ ದೈಹಿಕ ಶಿಕ್ಷಣ ಮಹಾವಿದ್ಯಾಲಯಕ್ಕೆ ಸೇರಿರುವ ಸಿಪಿಇಡ್ ಮೈದಾನದ ಉಸ್ತುವಾರಿಗಾಗಿ 25-30 ಜನರ ಗುಂಪೊಂದು ಅಲ್ಲಿನ ಪ್ರಿನ್ಸಿಪಾಲ್ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಏನಿದು ಘಟನೆ ..?: ಸಿಪಿಇಡ್ ಮೈದಾನದ ಪೂರ್ಣ ಜವಾಬ್ದಾರಿಯನ್ನು ಇಲ್ಲಿನ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಆಗಿರುವ ಅರುಣಕುಮಾರ ಜಯವಂತ ಅವರಿಗೆ ಅಧ್ಯಕ್ಷ ಬಿಷಪ್ ಎನ್ ಎಲ್ ಕರ್ಕರೆ ಅವರು ನೀಡಿದ್ದಾರೆ. ಹೀಗಾಗಿ ಈ ಮೈದಾನದಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮಗಳು ನಡೆಯಬೇಕಾದರೆ ಇಲ್ಲಿನ ಪ್ರಿನ್ಸಿಪಾಲ್ ಅವರಿಂದ ಅನುಮತಿ ಪಡೆದು ಕಾಲೇಜಿನ ಖಾತೆಗೆ ಹಣ ಹಾಕಿದಾಗ ಅವರು ಅನುಮತಿ ಪತ್ರ ನೀಡಿ ಪರವಾನಿಗೆ ಕೊಡುತ್ತಾರೆ. ಆದರೆ ಇಲ್ಲಿ ಆಗಿದ್ದೆ ಬೇರೆ… ಕೇಲವರು ಚರ್ಚ್ ಹಾಗೂ ಸಂಸ್ಥೆ ಹೆಸರಿನಲ್ಲಿ ನಕಲಿ ಲೇಟರ್ ಹೆಡ್ ಮುದ್ರಿಸಿದ್ದಾರೆ. ಅದರ ಮೇಲೆ ಸಹಿ ಹಾಕಿ ಅನುಮತಿ ನೀಡಿ ಹಣವನ್ನು ನಗದು ರೂಪದಲ್ಲಿ ತೆಗೆದುಕೊಂಡಿದ್ದಾರೆ. ಇದಕ್ಕೆ ಇಲ್ಲಿನ ಪ್ರಿನ್ಸಿಪಾಲ್ ನಕಲಿ ಪರವಾನಿಗೆ ಪಡೆದ ಆಯೋಜಕರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅನಧಿಕೃತವಾಗಿ ಪರವಾನಿಗೆ ನೀಡಿದವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅವರು 25- 30 ಜನ ಗೂಂಡಾಗಳ ಜೊತೆ ಕಾಲೇಜಿಗೆ ಬಂದು ಪ್ರಿನ್ಸಿಪಾಲ್ ಗೆ ಈ ಅನಧಿಕೃತವಾಗಿ ನೀಡಿರುವ ಪರವಾನಿಗೆಯನ್ನು ಅಧಿಕೃತವೆಂದು ಪರಿಗಣಿಸುವಂತೆ ಒತ್ತಡ ಹಾಕಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಪ್ರಿನ್ಸಿಪಾಲ್ ಮೇಲೆ ಹಲ್ಲೆ ನಡೆಸಿ ಕುಟುಂಬದವರಿಗೂ ಪ್ರಾಣ ಬೆದರಿಕೆ ಹಾಕಿ ಹೋಗಿದ್ದಾರೆ.
ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ 1.ಅಪರಿಚಿತ ವ್ಯಕ್ತಿಗಳು ಸೇರಿ
2.ದಿನಕರ ಚಿಲ್ಲಾ 3. ಶಾಂತ ಮೂಡಲಗಿ 4. ಮಧುಕರ ಉಟಂಗಿ 5. ಸೂರ್ಯಕಾಂತ ಕೊರವಿನಕೊಪ್ಪ 6 .ಶ್ರೀಪಾಲ್ ಮಲ್ಲನ್ನವರ ಸೇರಿ ಒಟ್ಟು ಆರು ಜನರ ಮೇಲೆ ಪ್ರಕರಣ ದಾಖಲಾಗಿದೆ.
ಹಗಲು ರಾತ್ರಿ ಕಾಯಿಸಿ ಕಾಟಾಚಾರಕ್ಕೆ ಕೇಸ್ ದಾಖಲಿಸಿಕೊಂಡ ಕ್ಯಾಂಪ್ ಪೊಲೀಸರು ..: ಹಲ್ಲೆಯಿಂದ ಗಾಯಗೊಂಡ ಪ್ರಿನ್ಸಿಪಾಲ್ ಅರುಣಕುಮಾರ ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಂತರ ಗೂಂಡಾಗಳು ಕುಟುಂಬದವರಿಗೂ ನೀಡಿದ ಬೆದರಿಕೆಗೆ ಹೆದರಿದ ಇವರು ಕ್ಯಾಂಪ್ ಪೊಲೀಸ್ ಠಾಣೆಗೆ ಶನಿವಾರ ಮಧ್ಯಾಹ್ನ ದೂರು ದಾಖಲಿಸಲು ಹೋಗಿದ್ದಾರೆ. ಆದರೆ ಅಲ್ಲಿನ ಪಿಎಸ್ಐ ಹಾಗೂ ಸಿಬ್ಬಂದಿ ಇವರಿಗೆ ಉಪನ್ಯಾಸ ನೀಡುತ್ತ ಪ್ರಕರಣ ದಾಖಲಿಸದಂತೆ ಕಾಲಹರಣ ಮಾಡಿ 10 ಗಂಟೆ ಸುಮಾರಿಗೆ ಪ್ರಕರಣ ದಾಖಲಿಸಿಕೊಳ್ಳದೆ ಮನೆಗೆ ಹೋಗಿದ್ದಾರೆ. ಪ್ರಾಣ ಬೆದರಿಕೆಯಿಂದ ಭಯಭೀತಗೊಂಡಿದ್ದ ಪ್ರಿನ್ಸಿಪಾಲ್ ಪ್ರಕರಣ ದಾಖಲಿಸಿಕೊಳ್ಳುವಂತೆ ಹಠ ಹಿಡಿದಾಗ ರಾತ್ರಿಯಿಡಿ ಕಾಯಿಸಿ ಬೆಳಗಿನ ಜಾವ 4:30 ಗಂಟೆಯವರೆಗೆ ಕುರಿಸಿಕೊಂಡು ಪಿರ್ಯಾದಿ ದೂರನ್ನು ತಿರುಚಿ ತಮಗೆ ಬೇಕಾದ ರೀತಿಯಲ್ಲಿ ಬರೆಸಿಕೊಂಡು ಪ್ರಕರಣ ದಾಖಲಿಸಿಕೊಂಡು ಕಳಿಸಿದ್ದಾರೆ.
ಪೊಲೀಸರ ಈ ನಡೆ ಹಿಂದೆ ಕಾಣದ “ಕೈ”ಗಳ ಕೈವಾಡ ಇರುವುದಾಗಿ ತಿಳಿದು ಬಂದಿದೆ. ಕಮಿಷನರ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಗೂಂಡಾಗಳನ್ನು ಮಟ್ಟಹಾಕಬೇಕಾಗಿರುವ ಠಾಣೆಯ ಪೊಲೀಸರು ಅವರ ಅಣತಿಯಂತೆ ವರ್ತಿಸುತ್ತಿರುವುದು ನಾಚಿಕೆಗೆಡಿನ ಸಂಗತಿಯಾಗಿದೆ. ಸ್ಥಳಿಯ ಪೊಲೀಸರಿಂದ ಸರಿಯಾಗಿ ನ್ಯಾಯ ಸಿಗದಿದ್ದರೆ ಕಮಿಷನರ್ ಕಛೇರಿ ಮುಂದೆ ನನ್ನ ಕುಟುಂಬ ಪ್ರತಿಭಟನೆ ನಡೆಸುವುದಾಗಿ ಬೆನನ್ ಸ್ಮಿತ್ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಪ್ರಿನ್ಸಿಪಾಲ್ ಅರುಣಕುಮಾರ ಪತ್ರಿಕೆಗೆ ತಿಳಿಸಿದ್ದಾರೆ.