ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇ 2.25ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸದ್ಯ, ಮೂಲವೇತನದ ಶೇ 8.50ರಷ್ಟು ತುಟ್ಟಿ ಭತ್ಯೆ ಇದ್ದು, ಅದನ್ನು ಶೇ 10.75ಕ್ಕೆ ಹೆಚ್ಚಿಸಲಾಗಿದೆ.2024ರ ಜನವರಿ 1ರಿಂದಲೇ ಇದು ಪೂರ್ವಾನ್ವಯವಾಗಲಿದೆ. ರಾಜ್ಯ ಸರ್ಕಾರದ 7ನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ತುಟ್ಟಿ ಭತ್ಯೆ ಪರಿಷ್ಕರಣೆ ಮಾಡಲಾಗಿದೆ.
7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳ ಅಡಿಯಲ್ಲಿ 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ರಾಜ್ಯ ಸರ್ಕಾರಿ ನೌಕರರುಗಳಿಗೆ ನೀಡಲಾಗುತ್ತಿರುವ ತುಟ್ಟಿ ಭತ್ಯೆಯ ದರ (DA) 1ನೇ ಜುಲೈ 2024 ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ 8.50% ರಿಂದ 10.75% ಕ್ಕೆ ಪರಿಷ್ಕರಿಸಿ ಅಂದರೆ ಶೇ 2.25%ರಷ್ಟಿ ಹೆಚ್ಚಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಉಮಾ.ಕೆ ಅವರು ಆದೇಶ ಹೊರಡಿಸಿದ್ದು, ಕೇಂದ್ರ ಸರ್ಕಾರದ ಆದೇಶವನ್ನು ರಾಜ್ಯ ಸರ್ಕಾರವು ಪರಿಗಣಿಸಿ, 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ತುಟ್ಟಿ ಭತ್ಯೆಯ ದರಗಳನ್ನು 2024ರ ಜುಲೈ 1ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ ಶೇ. 8.50 ರಿಂದ 10.75 ಕ್ಕೆ ಪರಿಷ್ಕರಿಸಿ ಹೆಚ್ಚಳ ಮಾಡಲು ಸರ್ಕಾರ ಹರ್ಷಿಸುತ್ತದೆ. ಆದರೆ, ಪರಿಷ್ಕೃತ ತುಟ್ಟಿ ಭತ್ಯೆಯ ದರಗಳ ಆರ್ಥಿಕ ಲಾಭವು 2024 ಆ.1ರಿಂದ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೂ ಸಹ 1ನೇ ಜುಲೈ 2024 ರಿಂದ ಜಾರಿಗೆ ಬರುವಂತೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರಗಳನ್ನು ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಪ್ರಸಕ್ತ 8.50% ರಿಂದ 10.75% ಗೆ ಹೆಚ್ಚಿಸಿ ಮಂಜೂರು ಮಾಡಲಾಗಿದೆ. ಆದರೆ, ಪರಿಷ್ಕೃತ ತುಟ್ಟಿ ಭತ್ಯೆಯ ದರಗಳ ಆರ್ಥಿಕ ಲಾಭವು ಆ.1ರ 2024 ರಿಂದ ಲಭ್ಯವಾಗುತ್ತದೆ. ತುಟ್ಟಿ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಗಳಲ್ಲಿ ಸೂಚಿಸಿರುವ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನವನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶಗಳು ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರುಗಳಿಗೂ ಸಹ ಅನ್ವಯಿಸುತ್ತವೆ. ಸರ್ಕಾರದ ಮತ್ತು ಜಿಲ್ಲಾ ಪಂಚಾಯತಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ಚಾರ್ಜ್ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರುಗಳಿಗೆ ಈ ಆದೇಶ ಅನ್ವಯಿಸುತ್ತದೆ.
ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಮತ್ತು ಎನ್ಜೆಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.