ಬೆಳಗಾವಿ: ಪ್ರತಿಷ್ಠಿತ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಕ್ಕೆ ಈಗ ಕಸರತ್ತು ಆರಂಭವಾಗಿದೆ. ಕಮಲ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲೇ ಬೇಕು ಎಂದು ಪಣ ತೊಟ್ಟಿದೆ.
ಕೆಲ ವರ್ಷಗಳ ಹಿಂದಿನವರೆಗೆ ಬೆಳಗಾವಿ ಮಹಾನಗರ ಪಾಲಿಕೆಯನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಳುತ್ತಿತ್ತು. ಆದರೆ, ಈಗ ಎಂಇಎಸ್ ಬಲ ಕುಸಿತಗೊಂಡಿದೆ. ಹೇಳಹೆಸರು ಇಲ್ಲದಂತೆ ಎಂಇಎಸ್ ನಾಮಾವಶೇಷಗೊಂಡಿದೆ. ಈಗ ಏನಿದ್ದರೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ರಾಜಕೀಯ ಪಕ್ಷಗಳದ್ದೇ ಪಾರುಪತ್ಯ ಎಂಬಂತಾಗಿದೆ. ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈಗ ನೇರ ಹಣಾಹಣಿ ನಡೆಯುತ್ತಿದೆ.
ಕಳೆದ ಸಲ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನವನ್ನು ಪಡೆದುಕೊಂಡು ಬೀಗಿತ್ತು. ಅತ್ಯಂತ ಸುಲಭವಾಗಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತು. ಆದರೆ ಈಗ ಕಾಲ ಬದಲಾದಂತಿದೆ. ಕೆಲ ಸದಸ್ಯರ ಸದಸ್ಯತ್ವ ಕಾರಣಾಂತರಗಳಿಂದ ರದ್ದುಕೊಂಡಿರುವುದು ಕಾಂಗ್ರೆಸ್ ಗುಂಪಿಗೆ ತುಸು ಬಲ ತಂದುಕೊಟ್ಟಿದೆ. ಇದು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ನೆರವಿಗೆ ಬರುತ್ತದೋ ನೋಡಬೇಕಾಗಿದೆ.
ಶುಭ ಶುಕ್ರವಾರ : ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಹುದ್ದೆಯ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 15 ರಂದು ಮೇಯರ್ ಮತ್ತು ಉಪಚುನಾವಣೆ ನಿಗದಿಯಾಗಿದೆ.
ಈ ಬಗ್ಗೆ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಅವರು, ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಹುಮತ ಹೊಂದಿದೆ. ಆದರೂ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಭಾರಿ ಪ್ರಯತ್ನ ನಡೆಸಿದೆ. ಇದು 23ನೇ ಅವಧಿಯ ಮೇಯರ್ ಮತ್ತು ಉಪಮೇಯರ್ ಹುದ್ದೆಯ ಚುನಾವಣೆಯಾಗಿದೆ.
ಗೋವಾವೇಸ್ ನ ತಿನಿಸು ಕಟ್ಟೆಯಲ್ಲಿ ಕಾನೂನು ಬಾಹೀರವಾಗಿ ಅಂಗಡಿಗಳನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪದ ಮೇರೆಗೆ
ಬಿಜೆಪಿ ಸದಸ್ಯರಾಗಿದ್ದ ಜಯಂತ ಯಾದವ್ ಮತ್ತು ಮಂಗೇಶ್ ಪವಾರ್ ಅವರ ಸದಸ್ಯತ್ವ ರದ್ದುಗೊಂಡಿದೆ. ಆದ್ದರಿಂದ ಒಟ್ಟು 58 ಸದಸ್ಯ ಬಲದ ಬೆಳಗಾವಿ ಪಾಲಿಕೆಯಲ್ಲೀಗ ಬಿಜೆಪಿ ಸದಸ್ಯರ ಬಲ 37 ರಿಂದ 35ಕ್ಕೆ ಕುಸಿತಗೊಂಡಿದೆ ಇದು ಕಾಂಗ್ರೆಸ್ ಪಾಳಯಕ್ಕೆ ಎಷ್ಟರ ಮಟ್ಟಿಗೆ ಲಾಭ ತಂದುಕೊಡಲಿದೆ ಕಾದು ನೋಡಬೇಕಾಗಿದೆ. ಆದರೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರ ಬಲಹೊಂದಿರುವ ಬಿಜೆಪಿ ಈ ಸಲವು ತನ್ನಲ್ಲಿಯೇ ಮೇಯರ್ ಮತ್ತು ಉಪಮೇಯರ್ ಹುದ್ದೆಯನ್ನು ತನ್ನಲ್ಲೆ ಉಳಿಸಿಕೊಳ್ಳಲು ರಣತಂತ್ರವನ್ನು ರೂಪಿಸಿದೆ. ಬೆಳಗಾವಿ ಮಹಾನಗರ ಪಾಲಿಕೆ ಈಗ ಸತೀಶ ಜಾರಕಿಹೊಳಿ ಹಾಗೂ ನಡುವಿನ ಪ್ರತಿಷ್ಠಿತ ಕಣವಾಗಿ ಪರಿವರ್ತನೆಗೊಂಡಿದ್ದು ಅಭಯ ಪಾಟೀಲ ಅವರು ಮತ್ತೆ ಪ್ರಾಬಲ್ಯ ಸಾಧಿಸಲು ಮುಂದಾಗಿದ್ದಾರೆ.
ಇನ್ನೊಂದಡೆ ಪಕ್ಷೇತರರು ಸೇರಿದಂತೆ 21 ಸದಸ್ಯರ ಬೆಂಬಲ ಹೊಂದಿರುವ ಕಾಂಗ್ರೆಸ್ ಶತಾಯಗತಾಯ ಈ ಸಲ ಬೆಳಗಾವಿ ಮೇಯರ್, ಉಪಮೇಯರ್ ಸ್ಥಾನವನ್ನು ತಾನೇ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ತಂತ್ರ ರೂಪಿಸುತ್ತಿದೆ. ಸತೀಶ ಜಾರಕಿಹೊಳಿಯವರು ಬಿಜೆಪಿಯಲ್ಲಿರುವ ಕೆಲವರನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ ಎನ್ನುವ ಮಾಹಿತಿ ಇದೆ. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ನಾಗರಾಜ ಯಾದವ್, ಚನ್ನರಾಜ ಹಟ್ಟಿಹೊಳಿ, ಲಖನ್ ಜಾರಕಿಹೊಳಿ, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ ಬಲ 29ಕ್ಕೆ ಏರಲಿದ್ದು, ಬಿಜೆಪಿಯ ನಾಲ್ವರನ್ನು ಸೆಳೆಯಲು ಕಾಂಗ್ರೆಸ್ ಈಗ ತನ್ನೆಲ್ಲಾ ಶಕ್ತಿಯನ್ನು ಪ್ರಯೋಗಿಸುತ್ತಿದೆ.
ಒಟ್ಟಾರೆ, ಈ ಸಲ ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಬಹುಮತ ಹೊಂದಿದ್ದರು ಕೆಲ ಕಾರಣಗಳಿಂದ ಬಲ ಕುಸಿತಗೊಂಡಿರುವ ಬಿಜೆಪಿಯಿಂದ ಕಾಂಗ್ರೆಸ್ ಈ ಬಾರಿ ಪ್ರತಿಷ್ಠಿತ ಮೇಯರ್, ಉಪಮೇಯರ್ ಸ್ಥಾನವನ್ನು ಗಿಟ್ಟಿಸಿಕೊಳ್ಳಲಿದೆಯೇ ನೋಡಬೇಕಾಗಿದೆ. ಒಂದು ವೇಳೆ ಈ ಸಲ ಕಮಲ ಪಕ್ಷದಿಂದ ಕಾಂಗ್ರೆಸ್ ಅಧಿಕಾರವನ್ನು ಕಿತ್ತುಕೊಂಡರೆ ಅದೊಂದು ಇತಿಹಾಸವಾಗಲಿದೆ.