ಘಟಪ್ರಭಾ: ಯಾರೇ ತಿಪ್ಪರಲಾಗ ಹಾಕಿದರು ಮುಂದೊಂದು ದಿನ ಗೋಕಾಕ ಜಿಲ್ಲೆ ಆಗೇ ಆಗುತ್ತದೆ. ಜಿಲ್ಲಾ ಕೇಂದ್ರದ ಘೋಷಣೆಗೆ ಗೋಕಾಕ ರೋಡ್ ರೈಲು ನಿಲ್ದಾಣ ಹೆಚ್ಚಿನ ಬಲ ತುಂಬಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಗುರುವಾರ ಮೇ 22 ರಂದು ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ 17 ಕೋಟಿ ರೂ.ಗಳ ವೆಚ್ಚದಲ್ಲಿ ಪುನರಾಭಿವೃದ್ದಿಗೊಂಡ ಗೋಕಾಕ ರೋಡ್ ರೈಲ್ವೆ ನಿಲ್ದಾಣದ ಲೋಕಾರ್ಪಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 86 ಜಿಲ್ಲೆಗಳ ರೈಲು ನಿಲ್ದಾಣಗಳು ಅಭಿವೃದ್ಧಿ ಹೊಂದಿದ್ದು, ರಾಜ್ಯದ ಬೆಳಗಾವಿ ಜಿಲ್ಲೆ ಸೇರಿದಂತೆ ಧಾರವಾಡ, ಬಾಗಲಕೋಟೆ, ಗದಗ, ಮುನಿರಾಬಾದ್ ಜಿಲ್ಲೆಯ ರೈಲು ನಿಲ್ದಾಣಗಳು ಈ ಭಾಗದ ಜನರಿಗೆ ಅತ್ಯಂತ ಅನುಕೂಲಕರವಾಗಿದ್ದು ಲೋಕಾರ್ಪಣೆ ಸಮಾರಂಭದಲ್ಲಿ ಜನರು ಅತ್ಯಂತ ವಿಜೃಂಭಣೆಯಿಂದ ಹಬ್ಬದ ವಾತಾವರಣದಲ್ಲಿ ಪಾಲ್ಗೊಂಡಿರುವುದನ್ನು ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.
ಬೆಳಗಾವಿ ಜಿಲ್ಲೆಗೆ ಬೆಳಗಿನ ಸಮಯದಲ್ಲಿ ಬೆಳಗಾವಿ-ಬೆಂಗಳೂರು ನಡುವೆ ವಂದೇ ಭಾರತ ರೈಲು ಮಂಜೂರಾಗಿದ್ದು, ಅತಿ ಶೀಘ್ರದಲ್ಲಿ ಪ್ರಾರಂಭಗೊಂಡು ಅದು ಕೂಡಾ ಈ ಭಾಗದ ಜನರ ಪ್ರಯಾಣಕ್ಕೆ ಹೆಚ್ಚು ಅನುಕೂಲವಾಗಲಿದೆ. ಜೊತೆಗೆ ಬೆಳಗಾವಿ -ಮಿರಜ್ ನಡುವೆ ಜನ ಸಾಮಾನ್ಯರ ಪ್ರಯಾಣಕ್ಕಾಗಿ ಮೆಮೊ ರೈಲು ಸಂಚಾರಕ್ಕೆ ಬೇಡಿಕೆ ಇಟ್ಟಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಭಾರತದ ರೈಲ್ವೆ ಇಲಾಖೆ ಮೂಲಸೌಕರ್ಯದ ಅಭಿವೃದ್ದಿಗೆ ಅತ್ಯಂತ ಮಹತ್ವ ನೀಡಿದ್ದು ಅಮೃತ್ ಭಾರತ ರೈಲು ನಿಲ್ದಾಣಗಳ ಮೂಲ ಸೌಕರ್ಯ ಮತ್ತು ಸಂಪರ್ಕವನ್ನು ವೃದ್ಧಿಸುವ ಜೊತೆಗೆ ಪ್ರಯಾಣಿಕರಿಗೆ ಹೆಚ್ಚು ಸುಧಾರಿತ ಅನುಭವವನ್ನು ಒದಗಿಸಲು ಮತ್ತು ಸ್ಥಳೀಯ ಪರಂಪರೆ ಮತ್ತು ಕರಕುಶಲತೆಯನ್ನು ಉತ್ತೇಜಿಸಲು ಸಹಾಯ ಮಾಡಲಿವೆ ಎಂದರು.
ಗೋಕಾಕ ರೋಡ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಹೊಸ ನಿಲ್ದಾಣದ ಕಟ್ಟಡ, ಪಾರ್ಕಿಂಗ್ಮತ್ತು ಸುಗಮ ವಾಹನ ಸಂಚಾರ ಪ್ರದೇಶ, ಹೊಸ ಪಾದಚಾರಿ ಸೇತುವೆ, ನವೀಕರಿಸಿದ ಶೌಚಾಲಯಗಳು, ಲಿಫ್ಟ್ ಗಳು, ವಿಶಾಲವಾದ ಕಾಯುವ ಕೋಣೆ, ಬೆಳಕು ಮತ್ತು ಡಿಜಿಟಲ್ ಮಾಹಿತಿ ವ್ಯವಸ್ಥೆ ಟಿಕೆಟ್ ಕೌಂಟರ್ಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳನ್ನು ನೀಡಲಾಗಿದೆ. ಈ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ಕೇಂದ್ರ ರೇಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಹಾಗೂ ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಇದರ ಜೊತೆಯಲ್ಲಿ ರೇಲ್ವೆ ಇಲಾಖೆ ಹಮ್ಮಿಕೊಂಡಿದ್ದ ವಿವಿದ ಸ್ಪರ್ದೆಯಲ್ಲಿ ವಿಜೇತರಾದ ಶಾಂತಿಸಾಗರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಶುಭ ಹಾರೈಸಿದರು. ಸ್ಥಳಿಯರು ವೇದಿಕೆಗೆ ಆಗಮಿಸಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರಿಗೆ ಗೋಕಾಕ ರೋಡ್ ರೇಲ್ವೆ ಸ್ಟೇಷನನಲ್ಲಿ ಎಕ್ಸಪ್ರೇಸ್ ರೈಲು ನಿಲುಗಡೆಗೆ ಒತ್ತಾಯಿಸಿ ಮನವಿ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್. ಎಂ. ಪಾಟೀಲ, ನೈರುತ್ಯ ರೈಲ್ವೆ ವಲಯದ ಮುಖ್ಯ ಕಮರ್ಷಿಯಲ್ ಮ್ಯಾನೇಜರ್ ಡಾ. ಅನೂಫ್ ಸಾಧು, ಡಿ.ಆರ್.ಯು.ಸಿ.ಸಿ ಸದಸ್ಯ ಫಕೀರಗೌಡ ಸಿದ್ದನಗೌಡರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ಗಣ್ಯರಾದ ರಾಮಣ್ಣ ಹುಕ್ಕೇರಿ, ರಾಜು ಕತ್ತಿ, ಸುರೇಶ ಪಾಟೀಲ, ಮಾರುತಿ ವಿಜಯನಗರ, ಮಹ್ಮದ ಗೌಸ್ ಬಾಗೇವಾಡಿ, ಹಿರಿಯ ವಿಭಾಗೀಯ ಸುರಕ್ಷಾ ನೀರಿಕ್ಷಕ ಡಾ. ಕಾರ್ತಿಕ, ಬೆಳಗಾವಿ ವಿಭಾಗದ ಕಮರ್ಷಿಯಲ್ ಮ್ಯಾನೇಜರ್ ಭೀಮಪ್ಪ ಮೇದಾರ, ರವೀಂದ್ರ ಮಾದರ, ಅಮರ ಬಡೋದೆ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.