ಬೆಳಗಾವಿ :
ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿ ಎಸ್ ಗಳು ಭಾರೀ ತಂತ್ರಗಾರಿಕೆ ನಡೆಸಿವೆ.
ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಸೋಮವಾರ ಜೆಡಿಎಸ್ ಅಭ್ಯರ್ಥಿ ಚಂದನ ಗಿಡ್ಡನ್ನವರ ತಮ್ಮ ನಾಮಪತ್ರ ಹಿಂಪಡೆವ ಮೂಲಕ ಶಾಕ್ ನೀಡಿದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿ ಡಾ. ಮಹಾಂತೇಶ ಕಡಾಡಿ ಅವರ ಪಾಲಿಗೆ ನೆರವು ನೀಡಲಿದೆ ಎಂಬ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಪಕ್ಷ ಜೆಡಿಎಸ್ ಅಭ್ಯರ್ಥಿಯನ್ನು ಹಿಂದೆ ಸರಿಸಲು ಯಶಸ್ವಿಯಾಗಿರುವುದು ತೆರೆಯ ಮರೆಯಲ್ಲಿ ಕಂಡು ಬಂದಿದೆ. ಬಿಜೆಪಿ ಅಭ್ಯರ್ಥಿಯಾಗಿರುವ ರಮೇಶ ಜಾರಕಿಹೊಳಿ ಅವರು ತಮ್ಮ ಬೆಂಬಲಿಗರ ಕ್ಷೇತ್ರಗಳಲ್ಲಿ ಓಡಾಡುತ್ತಿದ್ದಾರೆ. ಅಥಣಿ, ಕಾಗವಾಡ, ಬೆಳಗಾವಿ ಗ್ರಾಮೀಣದಲ್ಲಿ ಸಂಚರಿಸುತ್ತಿದ್ದು ಅವರನ್ನು ಗೋಕಾಕ ಮತಕ್ಷೇತ್ರದಲ್ಲಿ ಕಟ್ಟಿ ಹಾಕುವ ತಂತ್ರವಾಗಿ ಇದೀಗ ಕಾಂಗ್ರೆಸ್ ನಡೆಸಿರುವ ತಂತ್ರಗಾರಿಕೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಲೆಗೆ ಬಿದ್ದಿದ್ದು ಇದು ಪಕ್ಷದ ವರಿಷ್ಠರ ಗಮನಕ್ಕೆ ಬಂದಿದೆಯೋ ಬಂದಿಲ್ಲವೋ ಯಾರಿಗೂ ತಿಳಿಯದಾಗಿದೆ. ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಮೂಲಕವಾಗಿ ಗೋಕಾಕನಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಅಭ್ಯರ್ಥಿ ಚಂದನ ಗಿಡ್ಡನ್ನವರ ಅವರನ್ನು ಕಣದಿಂದ ಹಿಂದೆ ಸರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಈ ಒಪ್ಪಂದ ಯಾವ ಮಟ್ಟಿಗೆ ಫಲ ನೀಡುತ್ತದೆ ಕಾದು ನೋಡಬೇಕಾಗಿದೆ.