ಬೆಳಗಾವಿ :
ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ಮಹದಾಯಿ ನದಿ ನೀರಿನ ಯೋಜನೆಗೆ ಇದೀಗ ನೆರೆಯ ಗೋವಾ ತಕರಾರು ತೆಗೆದಿದೆ. ಕೇಂದ್ರ ಸರಕಾರ ನೀಡಿರುವ ಡಿಪಿಆರ್ ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಸಧ್ಯವೇ ಕೇಂದ್ರದ ಗಮನ ಸೆಳೆಯಲು ಗೋವಾ ಸರ್ಕಾರ ನಿರ್ಧರಿಸಿದೆ.
ಮಹದಾಯಿ ನದಿಗೆ ಅಡ್ಡಲಾಗಿ ಎರಡು ಜಲಾಶಯ ನಿರ್ಮಿಸುವ ಕರ್ನಾಟಕದ ಸಮಗ್ರ ಯೋಜನಾ ವರದಿಗೆ (ಡಿಪಿಅರ್) ಅನುಮೋದನೆ ನೀಡಿರುವುದನ್ನು ವಿರೋಧಿಸಿ ಕೇಂದ್ರಕ್ಕೆ ನಿಯೋಗ ಕರೆದೊಯ್ಯಲು ಗೋವಾ ಸರ್ಕಾರ ತೀರ್ಮಾನಿಸಿದೆ.
ತಮ್ಮ ನೇತೃತ್ವದ ನಿಯೋಗ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ತಿಳಿಸಿದರು.
ನದಿ ನೀರು ಹಂಚಿಕೆ ಕುರಿತು ಕರ್ನಾಟಕ– ಗೋವಾ ನಡುವೆ ಹಲವು ವರ್ಷಗಳಿಂದ ವಿವಾದವಿದೆ. ಎರಡು ಜಲಾಶಯ ನಿರ್ಮಿಸುವ ಡಿಪಿಅರ್ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಚೆಗೆ ಪ್ರಕಟಿಸಿದ್ದರು. ಹೀಗಾಗಿ, ಈ ವಿಷಯ ಚರ್ಚಿಸಲು ಗೋವಾದ ಮುಖ್ಯಮಂತ್ರಿ ಸೋಮವಾರ ವಿಶೇಷ ಸಂಪುಟ ಸಭೆ ಕರೆದಿದ್ದರು.
ಕರ್ನಾಟಕದ ಉದ್ದೇಶಿತ ಕಳಸಾ ಬಂಡೂರಿ ಯೋಜನೆಯ ಪರಿಣಾಮ ಗೋವಾದ ಉತ್ತರ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಪೂರೈಕೆ ಮೇಲೂ ಆಗಲಿದೆ. ಇದನ್ನು ಮನವರಿಕೆ ಮಾಡಿಕೊಡಲು ನಿಯೋಗವನ್ನು ಕರೆದೊಯ್ಯಲಾಗುವುದು ಎಂದು ತಿಳಿಸಿದರು.
ನೀರು ಹಂಚಿಕೆ ವಿಷಯದಲ್ಲಿ ವಿರೋಧ ಪಕ್ಷಗಳು ವಿರೋಧಿಸಬೇಕು ಎಂಬ ಕಾರಣಕ್ಕೆ ಆಕ್ಷೇಪಿಸಬಾರದು. ಮಹದಾಯಿ ಬದುಕಿನ ಪ್ರಶ್ನೆಯಾಗಿದ್ದು, ಎಲ್ಲರೂ ಒಗ್ಗೂಡಬೇಕು. ಮಹದಾಯಿ ನದಿ ತಾಯಿಗೆ ಸಮಾನವಾದುದು ಎಂದು ಸಾವಂತ್ ಹೇಳಿದರು.
ಮಹದಾಯಿ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯದ ಅನುಮೋದನೆಯೂ ಬೇಕಾಗುತ್ತದೆ. ಆದರೆ, ಮಹದಾಯಿ ನದಿ ವನ್ಯಜೀವಿ ಸಂರಕ್ಷಣೆ ಪ್ರದೇಶ ಹಾದುಹೋಗುವ ಹಿನ್ನೆಲೆಯಲ್ಲಿ ಈ ಅನುಮೋದನೆ ಸಿಗುವುದು ಅಸಂಭವ ಎಂದು ಅವರು ಪ್ರತಿಪಾದಿಸಿದರು.
ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕರ್ನಾಟಕಕ್ಕೆ ದೊಡ್ಡ ಉಡುಗೊರೆ ನೀಡಲು ಮಹದಾಯಿ ಯೋಜನೆಯ ಡಿಪಿಆರ್ ಗೆ ಒಪ್ಪಿಗೆ ನೀಡಲು ಮುಂದಾಗಿದೆ ಎಂದು ಗೋವಾದ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.