ಬೆಳಗಾವಿ:ಮಹಾದಾಯಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಟ್ವೀಟ್ ಮೂಲಕ ಸುಖಾಸುಮ್ಮನೆ ಕಿತಾಪತಿ ಎಬ್ಬಿಸಿರುವ ಗೋವಾ ಸಿಎಂ ಸಾವಂತ್ ಅವರಿಗೆ ತಿರುಗೇಟು ನೀಡುವಲ್ಲಿ ರಾಜ್ಯ ಸರಕಾರ ಕಳೆದ 72 ಗಂಟೆಯಿಂದ ಮೌನ ವಹಿಸಿರುವುದು ಗಮನ ಸೆಳೆದಿದೆ.
ಮಹಾದಾಯಿ ಟ್ರಿಬ್ಯೂನಲ್ ಶಿಫಾರಸ್ಸಿನ ಮೇರೆಗೆ ಕೇಂದ್ರದಿಂದ ಸೃಜಿಸಲಾದ ‘ಪ್ರವಾಹ’ (ಪ್ರೊಗ್ರೆಸಿವ್ ರಿವರ್ ಅಥಾರಿಟಿ ಫಾರ್ ವೆಲ್ಫೇರ್ ಆ್ಯಂಡ್ ಹಾರ್ಮನಿ)ಅಧಿಕಾರಿಗಳ ತಂಡ ಇಂದು ಗೋವಾ ಕರ್ನಾಟಕ ಗಡಿಯ ಕಣಕುಂಬಿಯಲ್ಲಿ ಸಭೆ ನಡೆಸಿತು.
ಪ್ರವಾಹವನ್ನು ನೀರಿನ ಯೋಜನಾ ಪ್ರದೇಶಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸಲು ಸಮಿತಿ ರಚಿಸಿರುವುದು ಗಮನಾರ್ಹ. ಆದರೆ ಗೋವಾ ಸಿಎಂ ಪ್ರಮೋದ ಸಾವಂತ್ ಟ್ವೀಟ್ ಮಾಡಿ ‘ಪ್ರವಾಹ’ವನ್ನು ಪರಿವೀಕ್ಷಣೆಗೆ ಕರೆಸಿದ್ದಾಗಲೂ ಕರ್ನಾಟಕ ಸರಕಾರ ನಿರ್ಲಕ್ಷ್ಯ ವಹಿಸಿದೆ. ನಿಯಮಿತ ಭೇಟಿಗಾಗಿ ಪ್ರವಾಹ ಆಗಮಿಸಿದೆ ಎಂದು ಗೋವಾ ಹೇಳಿಕೊಳ್ಳುತ್ತಿದ್ದರೂ ಅದರ ಹುನ್ನಾರ ಬೇರೆಯದೇ ಆಗದೆ. ಗೋವಾ ಸಿಎಂ ಟ್ವೀಟ್ ಮಾಡಿ 72 ಗಂಟೆ ಕಳೆದರೂ ಕರ್ನಾಟಕಮಾತ್ರ ಈ ವಿಷಯದಲ್ಲಿ ಗಮನ ಹರಿಸಿಲ್ಲ. ಸರಕಾರದ ಪರ ಹಿರಿಯ ಐಎಎಸ್ ಅಧಿಕಾರಿ ರಾಕೇಶ ಸಿಂಗ್ ಅವರೂ ಸಹ ಭಾಗವಹಿಸಿಲ್ಲ. ಕರ್ನಾಟಕ-ಗೋವಾ ನಡುವಿನ ಮಹದಾಯಿ ಯೋಜನಾ ಪ್ರದೇಶದಲ್ಲಿ ಸಾಮರಸ್ಯ ಮೂಡಿಸುವ ಪ್ರವಾಹ ಆಗಮಿಸಿ ಏನು ಪ್ರಯೋಜನಮಾಡಿ ಹೋಗಲಿದೆ ತಿಳಿದಿಲ್ಲ.
ಜಲಶಕ್ತಿ ಮಂತ್ರಾಲಯದ ‘ಪ್ರವಾಹ’ ಸಮಿತಿಯ ಚೇರಮನ್ ಪಿ. ಎಂ. ಸ್ಕಾಟ್, ಸದಸ್ಯರಾದ ಮುಖ್ಯ ಅಭಿಯಂತರ ವಿರೇಂದ್ರ ಶರ್ಮಾ, ನವದೆಹಲಿಯ ಹೈಡ್ರೋಲಾಜಿ ವಿಭಾಗದ ಮುಖ್ಯ ಅಭಿಯಂತರ ಮನೋಜ್ ತಿವಾರಿ, ಮಿಲಿಂದ ನಾಯಕ, ಸುಭಾಶಚಂದ್ರ ಸೇರಿ ಇತರ ಹಿರಿಯ ಅಧಿಕಾರಿಗಳು ಸಾಧಕ ಬಾಧಕಗಳ ಚರ್ಚೆ ಯೋಜನಾ ಪ್ರದೇಶದ ಕಣಕುಂಬಿ ಬಳಿ ನಡೆಸಿದರು.
ಕರ್ನಾಟಕ ಸರಕಾರದ ಮೌನ, ಗೋವಾ ಸಿಎಂ ಕಿತಾಪತಿ, ನಿಯಮಿತದ ಹೆಸರಿನಲ್ಲಿ ಆಗಮಿಸಿದ ಪ್ರವಾಹ ಸಮಿತಿಯ ಪರಿವೀಕ್ಷಣೆಗೆ ಕರ್ಬಾಟಕದ ಕನ್ನಡ ಹಾಗೂ ಸಾಮಾಜಿಕ ಸಂಘಟನೆಗಳ ಆಕ್ಷೇಪ ವ್ಯಕ್ತಪಡಿಸಿವೆ. ಹಿರಿಯ ಹೋರಾಟಗಾರ ಅಶೋಕ ಚಂದರಗಿ ಕರ್ನಾಟಕ ಸರಕಾರದ ಮೌನ ಹಾಗೂ ಗೋವಾ ಸಿಎಂ ಸಾವಂತ ಅವರ ತರಾತುರಿಯ ಉದ್ಧಟತನದ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ.