ದಾವಣಗೆರೆ :
ತನ್ನ ಮಾಲೀಕನ ಮೇಲೆ ಚಿರತೆ ದಾಳಿ ಮಾಡಿದಾಗ ರಕ್ಷಣೆಗೆ ಧಾವಿಸಿದ ಹಸು ಮಾಲೀಕನ ಜೀವ ಉಳಿಸಿದ ಘಟನೆ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಹೋಬಳಿಯ ಕೊಡಗೀಕೆರೆ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಘಟನೆ ನಡೆದಿದೆ.
ಚಿರತೆಯಿಂದ ದಾಳಿಗೆ ಒಳಗಾದ ಕರಿಹಾಲಪ್ಪ ಎಂಬ ರೈತನನ್ನು ಗೋವು ರಕ್ಷಿಸಿದೆ.
ಕೊಡಗೀಕೆರೆ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶ. ದಿನನಿತ್ಯದಂತೆ ಕರಿಹಾಲಪ್ಪ ಹಸು ಮೇಯಿಸಲು ಜಮೀನಿಗೆ ಹೋಗಿದ್ದಾರೆ. ಹಸು ಜೊತೆ ಕರಿಹಾಲಪ್ಪನ ಜೊತೆ ನಾಯಿಯೂ ಇತ್ತು. ಈ ಸಂದರ್ಭದಲ್ಲಿ ಏಕಾಏಕಿ ಕಾಡಿನ ಬದಿಯಿಂದ ಪ್ರತ್ಯಕ್ಷವಾದ ಚಿರತೆ ಕರಿಹಾಲಪ್ಪ ಹಾಗೂ ಆತನ ನಾಯಿಯ ಮೇಲೆ ದಾಳಿ ಮಾಡಿದೆ. ಕರಿಹಾಲಪ್ಪ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಹೋರಾಟ ನಡೆಸಿದ ಸಂದರ್ಭದಲ್ಲಿ ಆತನ ಬೆನ್ನಿನ ಮೇಲೆ ಚಿರತೆ ಉಗರಿನಿಂದ ಪರಚಿ ಗಾಯಗೊಳಿಸಿದೆ.
ಇದನ್ನು ನೋಡಿದ ಅಲ್ಲಿಯೇ ಮೇಯುತ್ತಿದ್ದ ಹಸು ಗೌರಿ ತಕ್ಷಣವೇ ತನ್ನ ಮಾಲೀಕನ ನೆರವಿಗೆ ಧಾವಿಸಿದೆ. ಚಿರತೆ ಮೇಲೆ ಪ್ರತಿದಾಳಿ ನಡೆಸಿದ ಹಸು ತನ್ನ ಕೊಂಬಿನಿಂದ ಚಿರತೆಗೆ ಬಲವಾಗಿ ತಿವಿದು ದೂರಕ್ಕೆ ಎಸೆದಿದೆ. ಹಸುವಿನಿಂದ ಬಲವಾದ ಏಟು ತಿಂದ ಚಿರತೆ ಅಲ್ಲಿಂದ ಪರಾರಿಯಾಗಿದೆ.
ಅದೃಷ್ಟವಶಾತ್ ಯಾವುದೇ ಗಂಭೀರ ಗಾಯವಾಗದೆ ರೈತ ಕರಿಹಾಲಪ್ಪ ಅಪಾಯದಿಂದ ಪಾರಾಗಿದ್ದಾರೆ. ಹಸುವು ತನ್ನ ಜೀವ ಉಳಿಸಿತು ಎಂದು ಕರಿಹಾಲಪ್ಪ ಹಸುವಿನ ಸ್ವಾಮಿ ನಿಷ್ಠೆಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.