ಬೆಳಗಾವಿ: ಮೂರು ವರ್ಷದ ಹಿಂದೆ ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ನಡೆದ ಸತೀಶ ಪಾಟೀಲ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 9 ಆರೋಪಿಗಳ ಪೈಕಿ ಐವರಿಗೆ ಜೀವಾವಧಿ ಶಿಕ್ಷೆ ಹಾಗೂ ನಾಲ್ವರಿಗೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ.
ಗೌಂಡವಾಡ ಗ್ರಾಮದ ದೇವಸ್ಥಾನದ
ಜಾಗವನ್ನು ಕೆಲ ಪ್ರಭಾವಿಗಳು ಒತ್ತುವರಿ ಪಡೆದುಕೊಂಡಿದ್ದರು. ದೇವಸ್ಥಾನದ ಜಾಗ ಮರಳಿ ಸಿಗಬೇಕೆಂದು ಸತೀಶ ಪಾಟೀಲ ಹೋರಾಟ ಮಾಡಿದ್ದರು. ಇದೇ ವೈಷಮ್ಯಕ್ಕೆ ಸತೀಶ ಪಾಟೀಲ ಅವರನ್ನು 2022ರಲ್ಲಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಗೌಂಡವಾಡದ ಒಟ್ಟು 9ನ ಆರೋಪಿಗಳನ್ನು ಬಂಧಿಸಿ ಈ ಪ್ರಕರಣವನ್ನು ಕಾಕತಿ ಪೊಲೀಸರು ದೋಷಾರೋಪಣ ಪಟ್ಟಿ ಸಿದ್ದ ಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಹತ್ಯೆ ಪ್ರಕರಣದ ವಿಚಾರಣೆ ನಡೆಸಿ, ವಾದ ಪ್ರತಿವಾದ ಆಲಿಸಿದ ನಂತರ ನ್ಯಾಯಾಧೀಶರು ಜಾಯಪ್ಪ ನೀಲಜಕರ (50), ಆನಂದ ಕುಟ್ರೆ (60), ಶಶಿಕಲಾ ಕುಟ್ರೆ (50), ಮಹಾಂತೇಶ ನಿಲಜಕರ(35), ಅರ್ನವ್ ಕುಟ್ರೆ (32) ಎಂಬವವರಿಗೆ ಜೀವಾವಧಿ ವಿಧಿಸಿತು. ಆರೋಪಿಗಳಿಗೆ ಒಟ್ಟು 13 ಲಕ್ಷ 75 ಸಾವಿರ ರೂ.ದಂಡ ವಿಧಿಸಿದ್ದಾರೆ. ಬಾಕಿ ನಾಲ್ವರ ಅಪರಾಧಿಗಳಿಗೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ.