ಜನ ಜೀವಾಳ ಜಾಲ :ಬೆಳಗಾವಿ :ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಜಗತ್ತಿನಲ್ಲಿಯೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು ಎಂದು ಜಿಎ ಪದವಿ ಪೂರ್ವ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಆರ್. ಎಸ್.ಪಾಟೀಲ ಹೇಳಿದರು.
ಸೋಮವಾರ ನಗರದ ಕೆಎಲ್ ಇ ಸಂಸ್ಥೆಯ ಜಿ.ಎ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಲ್ಲಿ ಅವರು ಮಾತನಾಡಿದರು. ಮಹಾತ್ಮಾ ಗಾಂಧೀಜಿ ಅವರು ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವ ಹಾಗೂ ವರ್ಚಸ್ಸು ಹೊಂದಿದ್ದರು. ಇಂತಹ ಪ್ರಭಾವಶಾಲಿ ವ್ಯಕ್ತಿಗಳು ಜಗತ್ತಿನಲ್ಲಿ ಸಿಗುವುದು ಅತ್ಯಂತ ವಿರಳ. ನಮ್ಮ ದೇಶದಲ್ಲಿ ಗಾಂಧೀಜಿಯವರನ್ನು ಹೊರತುಪಡಿಸಿದರೆ ಮಾಜಿ ಪ್ರಧಾನಿ ಇಂದಿರಾ ಗಾಂಧೀಜಿಯವರು ಸ್ವಲ್ಪಮಟ್ಟಿಗೆ ಅಂತಹ ವ್ಯಕ್ತಿತ್ವವನ್ನು ಹೊಂದಿದ್ದರು. ಆದರೆ, ಅವರಿಬ್ಬರ ನಂತರ ಅಂತಹ ಪ್ರಭಾವಶಾಲಿಯಾದ ವ್ಯಕ್ತಿತ್ವ ಯಾವ ನಾಯಕರಿಗೂ ಬರಲಿಲ್ಲ ಎಂದು ಅಭಿಪ್ರಾಯ ಪಟ್ಟರು.
ಗಾಂಧೀಜಿ ದೇಶದ ಜನತೆಗೆ ಕರೆ ನೀಡಿದಾಗ ಲಕ್ಷಾಂತರ ಜನ ಸೇರುತ್ತಿದ್ದರು. ಅವರಿಗೆ ಜನರನ್ನು ಸೆಳೆಯಲು ಅಂತದೊಂದು ಶಕ್ತಿ ಇತ್ತು. ಲಕ್ಷಾಂತರ ಮಹಿಳೆಯರು ಅವರ ಕರೆಗೆ ಓಗೊಟ್ಟು ಬ್ರಿಟಿಷರ ವಿರುದ್ಧ ಹೋರಾಡಲು ನಿಂತಿದ್ದನ್ನು ನಮ್ಮ ಇತಿಹಾಸ ತಿಳಿಸುತ್ತದೆ , ಮಹಿಳೆಯರು ಅತ್ಯಂತ ಮುಕ್ತವಾಗಿ ಗಾಂಧೀಜಿಯವರ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಗಾಂಧೀಜಿಯವರ ವ್ಯಕ್ತಿತ್ವಕ್ಕೆ ಕೇವಲ ಭಾರತ ಮಾತ್ರವಲ್ಲ, ಇಡೀ ಜಗತ್ತು ಮನ್ನಣೆ ನೀಡಿತ್ತು. ದೇಶವನ್ನು ಸ್ವಾತಂತ್ರ್ಯಗೊಳಿಸುವ ಸಂದರ್ಭದಲ್ಲಿ ಹಲವಾರು ನಾಯಕರು ವಿವಿಧ ರೀತಿಯ ಹೋರಾಟಗಳಿಗೆ ಕರೆ ನೀಡಿದ್ದರು. ನಮಗೆ ರಕ್ತ ಕೊಡಿ ನಾವು ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಗಾಂಧೀಜಿ ಮಾತ್ರ ತಾವು ನಂಬಿದ್ದ ಅಹಿಂಸಾವಾದದ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿ ಕೊಡುವಲ್ಲಿ ನಂಬಿಕೆ ಹೊಂದಿದ್ದರು. 1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲೇ ಗಾಂಧೀಜಿಯವರು ಮನಸ್ಸು ಮಾಡಿದ್ದರೆ ದೇಶ ಸ್ವತಂತ್ರ ಪಡೆಯುತ್ತಿತ್ತು. ಆದರೆ, ಅವರು ಅಂದು ತೆಗೆದುಕೊಂಡ ನಿರ್ಧಾರ ಗಮನಿಸಬೇಕಾಗಿದೆ. ನಮಗೆ ರಾಜಕೀಯ ಸ್ವಾತಂತ್ರ್ಯಕ್ಕಿಂತಲೂ ಸಾಮಾಜಿಕ ಸ್ವಾತಂತ್ರ್ಯ ಬಹಳ ಮುಖ್ಯ ಎಂದು ಹೇಳಿದರು. ಸ್ವಾತಂತ್ರ್ಯದ ಲಾಭ ಸಮಾಜದ ಕಟ್ಟ ಕಡೆಯ ಜನರು ಹಾಗೂ ಮಹಿಳೆಯರು ಪಡೆದುಕೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು. ಅದಕ್ಕಾಗಿ ಕೆಲ ವರ್ಷಗಳ ಕಾಲ ಕಾದು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟರು ಎಂದು ಹೇಳಿದರು.
ಗಾಂಧೀಜಿಯವರು ಸತ್ಯ ಹಾಗೂ ಅಹಿಂಸೆಯ ತತ್ವಗಳ ಮೇಲೆ ಬಲವಾದ ನಂಬಿಕೆಯನ್ನು ಹೊಂದಿದ್ದರು. ಅವರು ಸತ್ಯ ಹಾಗೂ ಅಹಿಂಸೆಗಾಗಿ ನೀಡಿದ ಕರೆಯಿಂದಾಗಿಯೇ ಇಂದು ಜಗತ್ತಿನ ಮೂರನೇ ಮಹಾಯುದ್ಧಕ್ಕೆ ಕಡಿವಾಣ ಬಿದ್ದಿದೆ. ಅವರ ಚಿಂತನೆಗಳನ್ನು ನಾವು ಸದಾ ಪರಿಪಾಲಿಸಲೇಬೇಕು. ಅವರು ಸತ್ಯವಾದಿ ಹಾಗೂ ನಿಷ್ಠುರವಾದಿಯಾಗಿ ಹೊರಹೊಮ್ಮಿದ್ದರು. ನೀನು ಬದುಕು ಇನ್ನೊಬ್ಬರಿಗೆ ಬದುಕಲು ಅವಕಾಶ ಕೊಡು ಎನ್ನುವುದು ಅವರ ತತ್ವ ಆಗಿತ್ತು. ಅವರ ತತ್ವವು ಸರ್ವಕಾಲಿಕ ಸತ್ಯವಾಗಿ ಗುರುತಿಸಿಕೊಂಡಿದೆ. ಗಾಂಧೀಜಿಯವರು ಎಲ್ಲಾ ಧರ್ಮಗಳನ್ನು ಬಹಳ ನಂಬಿದ್ದರು. ಧರ್ಮದ ಕರ್ತವ್ಯವನ್ನು ಪ್ರತಿಪಾದಿಸುತ್ತಿದ್ದರು.
ಪ್ರತಿಯೊಂದು ಧರ್ಮದ ಕರ್ತವ್ಯ ಎಂದರೆ ಮನುಷ್ಯನ ಹೃದಯದಲ್ಲಿರುವ ಅತ್ಯುತ್ತಮ ಭಾವನೆಗಳನ್ನು ಹೊರ ಹಾಕುವುದೇ ಎನ್ನುದಾಗಿತ್ತು. ಎಲ್ಲಾ ಧರ್ಮಗಳ ಸಾರ ಹಾಗೂ ಉದ್ದೇಶವೇ ಅದಾಗಿದೆ ಎಂದು ಪ್ರತಿಪಾದಿಸಿದ್ದರು. ಗಾಂಧೀಜಿ ಎನ್ನುವುದೇ ಒಂದು ಸಿದ್ಧಾಂತ. ಗಾಂಧೀಜಿ ಎನ್ನುವುದೇ ಬಂದು ವ್ಯಕ್ತಿತ್ವ. ಗಾಂಧೀಜಿ ಎನ್ನುವುದೇ ಒಂದು ಮಹಾನ್ ಶಕ್ತಿ ಎಂದು ಹೇಳಿದರು.
ಇಂಗ್ಲೆಂಡಿನ ಪ್ರಧಾನಿ ಚರ್ಚಿಲ್ ಅವರು ಗಾಂಧೀಜಿಯವರನ್ನು ಅರ್ಧ ಬೆತ್ತಲೆ ಫಕೀರ ಎಂದು ಛೇಡಿಸಿದ್ದರು. ಆದರೆ, ಅದೇ ಗಾಂಧೀಜಿ ಮುಂದೊಂದು ದಿನ ದೇಶ ಸ್ವಾತಂತ್ರ್ಯ ಗಳಿಸುವಲ್ಲಿ ಕಾರಣವಾಗಿರುವುದನ್ನು ನಾವು ನೋಡಬಹುದು. ಆಗ ಅದೇ ಚರ್ಚಿಲ್ ಗಾಂಧೀಜಿಯವರನ್ನು ಜಗತ್ತಿನ ಬಹುದೊಡ್ಡ ಪ್ರವಾದಿ ಎಂದು ಕರೆದರು. ಭಾರತೀಯ ಇತಿಹಾಸದಲ್ಲಿ ಗಾಂಧೀಜಿಯವರಿಗೆ ಬಹು ಉನ್ನತವಾದ ಸ್ಥಾನವಿದೆ. ಭಾರತೀಯ ಚರಿತ್ರೆಯಲ್ಲಿ ದೇಶದ ಜನರ ನಾಡಿಮಿಡಿತವನ್ನು ಅರಿತ ನಾಯಕ ಇದ್ದರೆ ಅದು ಗಾಂಧೀಜಿ ಮಾತ್ರ. ಅವರಿಗೆ ನಮ್ಮ ದೇಶದ ಜನರ ಸಮಸ್ಯೆಗಳ ಅರಿವಿದ್ದವು. 1919 ರಲ್ಲಿ ಚಂಪಾರಣ್ಯದಿಂದ ಆರಂಭವಾದ ಅವರ ಹೋರಾಟ 1948 ರ ವರೆಗೂ ನಡೆದು ಆ ಅವಧಿಯವರೆಗೆ ಅವರೇ ಇಡೀ ದೇಶದ ಹೀರೋ ಎನ್ನುವ ಮಟ್ಟಿಗೆ ಅವರನ್ನು ದೇಶ ಒಪ್ಪಿಕೊಂಡಿತು ಎಂದರು.
ಕೆಎಲ್ಇ ಸಂಸ್ಥೆಯ ಅಜೀವ ಸದಸ್ಯ ಎಂ.ಎಸ್. ಬಳಿಗಾರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಈ ಮಹನೀಯರು ಭಾರತದ ಆದರ್ಶರಾಗಿದ್ದಾರೆ. ಅವರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.
ಉಪ ಪ್ರಾಚಾರ್ಯ ಎಸ್. ಆರ್. ಗದಗ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಾದ ಕಾವೇರಿ ಮುತ್ತೆಣ್ಣನವರ, ಕಾವ್ಯಾಂಜಲಿ ಕಿಣೇಕರ, ಸುಮಾ ಹೆಗಡೆ, ಮಂಜುಳಾ ಜುಂಜನ್ನವರ ಅವರು ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಕುರಿತು ಮಾತನಾಡಿದರು. ಸಹ ಶಿಕ್ಷಕಿ ಪ್ರಿಯಾ ಸುಣಗಾರ ಮಾತನಾಡಿದರು. ಸಹ ಶಿಕ್ಷಕ ಆರ್.ಎಂ.ಮಗದುಮ್ಮ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಬೋಧಕಿ ಮಂಜುಳಾ ಶೆಟ್ಟೆನ್ನವರ ವಂದಿಸಿದರು. ಸಹ ಶಿಕ್ಷಕಿ ಸೀಮಾ.ಸಿ. ಕೋರೆ ನಿರೂಪಿಸಿದರು.